ಕೇರಳದಲ್ಲಿ ಪತ್ತೆಯಾಯ್ತು ಸೊಂಡಿಲು ಇಲ್ಲದ ಆನೆ; ಚಿಂತೆಗೀಡಾದ ಪ್ರಾಣಿ ಪ್ರಿಯರು

elephant (1)
Published on

ಕೇರಳ: ನಾವು ನೋಡಿರುವ ಆನೆಗಳಿಗೆ ಉದ್ದನೆಯ ಸೊಂಡಿಲು, ಅಗಲವಾದ ಕಿವಿ ಇರುತ್ತದೆ ಅಲ್ಲವೇ. ವಿಶೇಷವಾಗಿ ಆನೆ ಸೊಂಡಿಲಿನಿಂದ 300 ಕೆಜಿ ತೂಕವನ್ನು ಸುಲಭವಾಗಿ ಎತ್ತಬಲ್ಲದು. ಅಷ್ಟೇ ಏಕೆ, ಕಾರುಗಳು ಮತ್ತು ಇತರ ವಾಹನಗಳನ್ನು ಸುಲಭವಾಗಿ ಎತ್ತಬಹುದು. ಆದರೆ ಅದೇ ಆನೆಗೆ ಸೊಂಡಿಲು ಇಲ್ಲದಿದ್ದರೆ...?

ಹೌದು, ಅರಣ್ಯಾಧಿಕಾರಿಗಳು ಅತಿರಪ್ಪಿಲ್ಲಿಯ ದಟ್ಟಕಾಡಿನಲ್ಲಿ ಸೊಂಡಿಲಿಲ್ಲದ ಆನೆಯನ್ನು ಪತ್ತೆ ಮಾಡಿದ್ದಾರೆ. ಕೇರಳ ಮತ್ತು ತಮಿಳುನಾಡು ನಡುವೆ ಸಂಚರಿಸುತ್ತಿದ್ದ ಆನೆಗಳ ಹಿಂಡಿನ ಮೇಲೆ ನಿಗಾ ಇಟ್ಟಿದ್ದ ಅಧಿಕಾರಿಗಳು ಈ ಸೊಂಡಿಲು ಇಲ್ಲದ ಆನೆ ಕಂಡು ಬೆಚ್ಚಿಬಿದ್ದಿದ್ದಾರೆ. ನಂತರ ಆನೆಯ ಆರೋಗ್ಯದ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸಲಾಯಿತು. ಚೂಪಾದ ಲೋಹದ ತಂತಿಗಳಿಗೆ ತಾಗಿ ಆನೆಗಳ ಸೊಂಡಿಲು ತುಂಡಾಗುವ ಸಂಭವವಿದೆ. ಆದರೆ ಸೊಂಡಿಲು ಇಲ್ಲದ ಆನೆ ಪತ್ತೆಯಾದ ಮೊದಲ ಪ್ರಕರಣ ಇದಾಗಿದೆ ಎಂದು ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆನೆಗಳಿಗೆ ತಿನ್ನಲು, ಕುಡಿಯಲು ಮತ್ತು ಬೆರೆಯಲು ಸೊಂಡಿಲು ಬೇಕು. ಆದರೆ ಈ ಆನೆಗೆ ಸೊಂಡಿಲು ಇಲ್ಲದಿರುವುದು ಅದರ ಉಳಿವಿನ ಬಗ್ಗೆ ಆತಂಕ ಮೂಡಿಸಿದೆ ಎನ್ನುತ್ತಾರೆ ಅಧಿಕಾರಿಗಳು. ಸದ್ಯ ಆನೆ ಮರಿ ಆರೋಗ್ಯವಾಗಿದೆ ಎಂದು ಹೇಳಿದ್ದು, ಅದನ್ನು ಆರೈಕೆ ಶಿಬಿರಕ್ಕೆ ಸ್ಥಳಾಂತರಿಸುವ ಅಗತ್ಯವಿಲ್ಲ. ಮುಂದಿನ ಪರೀಕ್ಷೆಯ ನಂತರ ತೀರ್ಮಾನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಳು ತಿಂಗಳ ಹಿಂದೆ ಆನೆಗೆ ಯಾವುದೇ ತೊಂದರೆ ಇರಲಿಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ, ಇದು ಸುಮಾರು ನಾಲ್ಕು ವರ್ಷದ ಮರಿ ಎಂದು ಅಂದಾಜಿಸಲಾಗಿದೆ. ಇದುವರೆಗೆ ಅಧಿಕಾರಿಗಳು ನಾಲ್ಕು ಬಾರಿ ಈ ಆನೆಗಳನ್ನು ಪರೀಕ್ಷಿಸಿದ್ದಾರೆ. ಆದರೆ ಈ ಬಾರಿ ಆನೆ ಬಲಹೀನವಾಗಿದೆ. ಸಾಮಾನ್ಯವಾಗಿ, ತಾಯಿ ಆನೆಗಳು ತಮ್ಮ ಮರಿ ಆನೆಗಳಿಗೆ ನಾಲ್ಕರಿಂದ ಐದು ವರ್ಷಗಳವರೆಗೆ ಹಾಲು ನೀಡುತ್ತವೆ. ಅಸಾಮಾನ್ಯ ಸಂದರ್ಭಗಳಲ್ಲಿ ಹಾಲು ನೀಡುವುದನ್ನು ನಿಲ್ಲಿಸುತ್ತವೆ. ಆದರೆ ಸೊಂಡಿಲಿಲ್ಲದ ಮರಿ ಆನೆ ಆಹಾರದ ಕೊರತೆಯಿಂದ ದುರ್ಬಲವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಇತರ ಪ್ರಾಣಿಗಳಂತೆ ಈ ಆನೆಯು ಕಾಡು ಆಹಾರ ತಿನ್ನುವುದಿಲ್ಲ. ಹುಲ್ಲು ಮಾತ್ರ ತಿನ್ನುವುದು. ಇದು ಭವಿಷ್ಯದಲ್ಲಿ ಹೆಚ್ಚು ಸಮಸ್ಯಾತ್ಮಕವಾಗಲಿದೆ. ಗಂಡು ಆನೆಯಾದರೆ ಅದರ ಬದುಕು ದುಸ್ತರ. ಇದು ಆನೆ ಪ್ರಿಯರನ್ನು ಚಿಂತೆಗೀಡು ಮಾಡಿದೆ. ಸೊಂಡಿಲಿನ ಮೇಲಿನ ಭಾಗದಲ್ಲಿ ಕತ್ತರಿಸಿದ ಗುರುತು ಕಂಡುಬಂದಿದ್ದು, ಅದು ಹುಟ್ಟಿನಿಂದಲೋ ಹೀಗೆ ಇದೆಯೋ ಅಥವಾ ಅಪಘಾತದಿಂದಲೋ ಎಂದು ಅರಣ್ಯಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net