

ಬೆಂಗಳೂರು: ಅವಿವಾಹಿತ ವ್ಯಕ್ತಿಗೆ ಮದುವೆ ಆಗುವಂತೆ ಸ್ತ್ರೀ ವಶೀಕರಣ ಪೂಜೆ ಮಾಡುವುದಾಗಿ ನಂಬಿಸಿದ ಜ್ಯೋತಿಷಿಗಳು, 1.37 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ.
ಹೆಬ್ಬಾಳದ ಗುಡ್ಡದಹಳ್ಳಿಯ ವ್ಯಕ್ತಿ ಕೊಟ್ಟ ದೂರಿನ ಮೇರೆಗೆ ಸಿಇಎನ್ ಠಾಣೆ ಪೊಲೀಸರು ದಯಾನಂದ್ ಭಟ್ ಮತ್ತು ದತ್ತುರಾಜ ಭಟ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
40 ವರ್ಷ ಆದರೂ ಮದುವೆಯಾದ ಕಾರಣಕ್ಕೆ ದೂರುದಾರ, 2022ರ ನ. 18ರಂದು ಫೇಸ್ ಬುಕ್ ನಲ್ಲಿ ಸೀ ವಶೀಕರಣ ಮಾಡಿಕೊಡುವುದಾಗಿ ಜ್ಯೋತಿಷಿಗಳು ಕೊಟ್ಟಿದ್ದ ಜಾಹೀರಾತು ಗಮನಿಸಿದ್ದ. ಜಾಹೀರಾತಿನಲ್ಲಿ ಸಿಕ್ಕ ಮೊಬೈಲ್ ನಂಬರ್‌ಗೆ ದೂರುದಾರ ಕರೆ ಮಾಡಿದ್ದ. ಆಗ ಆರೋಪಿತರು ನಿಮ್ಮ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಬೇಕು. ಅದಕ್ಕೆ 5,801 ರೂ. ಫೋನ್ ಪೇ ಮಾಡುವಂತೆ ಸೂಚಿಸಿದ್ದರು.
ಆ ಪ್ರಕಾರ ದೂರುದಾರ ಹಣ ರವಾನಿಸಿದ್ದ. ಸ್ವಲ್ಪ ದಿನ ಬಿಟ್ಟು ಮತ್ತೆ ಕರೆ ಮಾಡಿದಾಗ ಸ್ತ್ರೀ ವಶೀಕರಣ ಪೂಜೆ ಸರಿಯಾಗಿ ಆಗಿಲ್ಲ. ಮತ್ತೊಮ್ಮೆ ಪೂಜೆ ಮಾಡಿದರೆ ಮದುವೆ ಆಗಲಿದೆ ಎಂದು ನಂಬಿಸಿದ್ದರು. ಬಳಿಕ ದೂರುದಾರ ಹಂತ ಹಂತವಾಗಿ 1.37 ಲಕ್ಷ ರೂ. ವರ್ಗಾವಣೆ ಮಾಡಿದ್ದ.
ಆದರೆ, ಯಾವುದೇ ಪ್ರಯೋಜನವಾಗದೇ ಇದ್ದಾಗ, ಕೊನೆಗೆ ದಯಾನಂದ ಭಟ್ ಮತ್ತು ದತ್ತುರಾಜ್ ಭಟ್ ವಂಚನೆ ಮಾಡುತ್ತಿರುವುದು ಮನವರಿಕೆಯಾಗಿ ಸಿಇಎನ್ ವಿಭಾಗ ಠಾಣೆಗೆ ದೂರು ಸಲ್ಲಿಸಿದ್ದ. ಇದರ ಮೇರೆಗೆ ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.