250 ಶಿಶುಗಳು ಸೇಲ್!; ಬಗೆದಷ್ಟೂ ಆಳಕ್ಕೆ ಮಾರಾಟ ಜಾಲ

baby
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಪತ್ತೆಯಾಗಿರುವ ಮಕ್ಕಳ ಮಾರಾಟ ಜಾಲದ ಮತ್ತಷ್ಟು ಸ್ಪೋಟಕ ವಿಚಾರಗಳು ಬೆಳಕಿಗೆ ಬಂದಿವೆ. ಬಂಧಿತ ಆರೋಪಿಗಳ ಹೇಳಿಕೆಯಂತೆ ತಮಿಳá-ನಾಡಿನಲ್ಲಿ ಮತ್ತೊಂದು ತಂಡ ಸಕ್ರಿಯವಾಗಿದ್ದು, 250ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿರುವುದು ಸಿಸಿಬಿ ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. ಕರ್ನಾಟಕದಲ್ಲಿ 50 ರಿಂದ 60 ಮಕ್ಕಳನ್ನು ಮಾರಾಟ ಮಾಡಿದರೆ, ಉಳಿದ ಮಕ್ಕಳನ್ನು ತಮಿಳುನಾಡಲ್ಲಿ ಮಾರಾಟ ಮಾಡಿರುವ ಬಗ್ಗೆ ಸುಳಿವು ಸಿಕ್ಕಿದೆ. ಮಕ್ಕಳ ಮಾರಾಟದ ವಿಚಾರವನ್ನು ಬಾಯಿಬಿಡುತ್ತಿದ್ದಂತೆ ತನಿಖೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು, ಕರ್ನಾಟಕದಲ್ಲಿ ಮಾರಾಟವಾಗಿರುವ ಮಕ್ಕಳ ಬಗ್ಗೆ ಆರೋಪಿಗಳಿಂದ ಮಾಹಿತಿ ಕಲೆಹಾಕುತ್ತಿದ್ದಾರೆ. ಸದ್ಯ 10ಮಕ್ಕಳ ಸುಳಿವು ಸಿಕ್ಕಿದ್ದು, ಉಳಿದ ಮಕ್ಕಳನ್ನು ಎಲ್ಲಿ? ಯಾರಿಗೆ? ಮಾರಾಟ ಮಾಡಲಾಗಿದೆ ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಣ್ಣು ಮಗುವಿಗೆ 2, ಗಂಡಿಗೆ 3 ಲಕ್ಷ ರೂಪಾಯಿ: ಮಹಾಲಕ್ಷ್ಮೀ 2021ರಿಂದಲೂ ಬಾಡಿಗೆ ತಾಯಿಯಾಗಿ ಮಕ್ಕಳನ್ನು ಕೊಡಿಸುವ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದು, ಯಾರು ಗರ್ಭಪಾತ ಮಾಡಿಸಲು ಆಸ್ಪತ್ರೆಗೆ ಬರಲಿದ್ದಾರೆ ಎಂಬ ಮಾಹಿತಿ ತಿಳಿದು ಅವರನ್ನು ಸಂರ್ಪಸಿ ಗರ್ಭಪಾತ ಮಾಡಿಸಬೇಡಿ, ನಾವು ಮಗುವನ್ನು ನೋಡಿಕೊಳ್ಳುತ್ತೇವೆ. ಮಗು ಆಗುವವರೆಗೂ ಎಲ್ಲ ಖರ್ಚು ವೆಚ್ಚವನ್ನೂ ಭರಿಸುತ್ತೇವೆ. ಹೆರಿಗೆಯ ಬಳಿಕ ಮಗುವನ್ನು ನಮಗೆ ಕೊಡಿ ಎಂದು ಮನವೊಲಿಸುತ್ತಿದ್ದರು. ಹೆಣ್ಣು ಮಗುವಿಗೆ 2 ಲಕ್ಷ ರೂ., ಗಂಡು ಮಗುವಿಗೆ 3 ಲಕ್ಷ ರೂ. ಕೊಡುವ ಒಪ್ಪಂದ ಮಾಡಿ ಆ ಮಕ್ಕಳನ್ನು ಹೊರಗಡೆ 8 ರಿಂದ 10 ಲಕ್ಷ ರೂಪಾಯಿಗೆ ಮಾರಾಟ ಮಾಡುತ್ತಿದ್ದರು.

ಅಂಡಾಣು ಮಾರಾಟ: 2017ರಿಂದಲೂ ಈ ದಂಧೆಯನ್ನು ಮಾಡುತ್ತಾ ಬಂದಿರುವ ಆರೋಪಿ ಮಹಾಲಕ್ಷ್ಮೀ ನಾಲ್ಕೈದು ವರ್ಷಗಳ ಹಿಂದೆ ಬಾಡಿಗೆ ಮನೆಯಲ್ಲಿದ್ದುಕೊಂಡು ಗಾರ್ವೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದಳು. ಈಗ ಮಕ್ಕಳ ಮಾರಾಟ ಜಾಲದಿಂದ ಆಕೆ ಲಕ್ಷಾಂತರ ರೂ. ಸಂಪಾದಿಸಿದ್ದಾಳೆ. ಸ್ವಂತ ಮನೆ, ಕಾರು ಜತೆಗೆ ಚಿನ್ನಾಭರಣ ಹೊಂದಿದ್ದಾಳೆ ಎನ್ನಲಾಗಿದೆ. 2015 ರಿಂದ 2017ರವರೆಗೂ ಗಾರ್ವೆಂಟ್ಸ್ ನಲ್ಲಿ 8 ಸಾವಿರ ರೂ. ಸಂಬಳಕ್ಕೆ ಕೆಲಸ ಮಾಡುತ್ತಿದ್ದ ವೇಳೆ ಆಕೆಗೆ ಪರಿಚಯವಾದ ಮಹಿಳೆ ಅಂಡಾಣು ಕೊಟ್ಟರೆ ಹಣ ಕೊಡುವುದಾಗಿ ಕೇಳಿದ್ದಳು. ಆಗ ಅಂಡಾಣು ನೀಡಿದ್ದ ಮಹಾಲಕ್ಷ್ಮೀಗೆ 20 ಸಾವಿರ ರೂ. ನೀಡಲಾಗಿತ್ತು. ನಂತರದ ದಿನಗಳಲ್ಲಿ ಅಂಡಾಣು ಕೊಡುವವರನ್ನು ಪತ್ತೆ ಮಾಡಿ ಅದರಿಂದ ಕಮಿಷನ್ ಪಡೆಯುವ ಕೆಲಸ ಮಾಡಿಕೊಂಡಿದ್ದಳು ಎಂಬ ವಿಚಾರವೂ ತನಿಖೆಯಿಂದ ತಿಳಿದುಬಂದಿದೆ.

ತಮಿಳುನಾಡಲ್ಲಿ ಮತ್ತೊಂದು ಗ್ಯಾಂಗ್: ತಮಿಳುನಾಡಿನಲ್ಲಿ ಇದೇ ಮಾದರಿಯಲ್ಲಿ ಮಕ್ಕಳು ಮತ್ತು ಮಹಿಳೆಯರ ಅಂಡಾಣುಗಳ ಮಾರಾಟ ಮಾಡುವ ಮತ್ತೊಂದು ತಂಡ ಸಕ್ರಿಯವಾಗಿದ್ದು, 250ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿರುವುದು ಗೊತ್ತಾಗಿದೆ. ಈ ಗ್ಯಾಂಗ್ ಜತೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಹತ್ತು ಮಂದಿ ಪೈಕಿ ತಮಿಳುನಾಡಿನ ಕಣ್ಣನ್ ರಾಮಸ್ವಾಮಿ, ಗೋಮತಿ, ಹೇಮಲತಾ, ರಾಧಾ ಸೇರಿ ಐದಾರು ಮಂದಿ ಸಂಪರ್ಕದಲ್ಲಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಬಂಧಿತ ಆರೋಪಿಗಳು ಇದುವರೆಗೂ 10 ಮಕ್ಕಳನ್ನು ಮಾರಾಟ ಮಾಡಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಈ ಸಂಬಂಧ ಆರೋಪಿಗಳ ವಿಚಾರಣೆ ಮುಂದುವರಿದಿದೆ.

| ಬಿ.ದಯಾನಂದ್ ನಗರ ಪೊಲೀಸ್ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net