

ಅನಂತಕಾಲ ತರುಮರಾದಿಗಳಲ್ಲಿಗೆ ಹೋಗಿ ತಪವಿರದವನು ಒಂದು ದಿನ ಗುರುಚರಣ ಸೇವೆ ಮಾಡಿದರೆ ಸಾಲದೆ?- ಆ ತಪಸ್ಸಿನ ಫಲ ಸೇವೆಯಲ್ಲಿ ಸಿಗುವುದು. ಮತ್ತೆ ಅನಂತಕಾಲ ಗುರುಚರಣ ಸೇವೆಯ ಮಾಡುವವನು ಒಂದು ದಿನ ಲಿಂಗಪೂಜೆ ಮಾಡಿದರೆ ಆಗದೆ? ಲಿಂಗಪೂಜಿಸಿದ ಫಲ ಎಲ್ಲಿದೆ ಎಂದರೆ ಜಂಗಮ ದಾಸೋಹದಲ್ಲಿದೆ.
ಅದಕ್ಕೆ ಶರಣರು ದಿನನಿತ್ಯ ದಾಸೋಹವ ಮಾಡಿ ಮಿಕ್ಕ ಪ್ರಸಾದವ ಸೇವಿಸುತ್ತಿದ್ದರು. ತಪಸ್ಸು ಮಾಡಿದ ಫಲ ಗುರುಸೇವೆಯಲ್ಲಿ ಇದೆ. ಗುರುಗಳ ಸೇವೆ ಮಾಡಿದ ಫಲ ಲಿಂಗಪೂಜೆಯಲ್ಲಿದೆ. ಲಿಂಗಪೂಜೆ ಮಾಡಿದ ಫಲ ಜಂಗಮ ತೃಪ್ತಿಯಲ್ಲಿದೆ. ಇವೆಲ್ಲ ಮಾಡಿದ ಫಲ ಒಂದು ನಿಮಿಷ ಶರಣರ ಅನುಭಾವ ಮಾಡಿದರೆ ಸಿಗುತ್ತದೆ.
ಒಮ್ಮೆ ಪ್ರಭುದೇವರ ಅಧ್ಯಕ್ಷತೆಯಲ್ಲಿ ಅನುಭವ ಮಂಟಪದಲ್ಲಿ ಶಿವಾನುಭವ ಚರ್ಚೆ ನಡೆದಿರುತ್ತದೆ. ಆಗ ಅಲ್ಲಿ ಘಟಿವಾಳಯ್ಯ ಶರಣರು ಬಂದಿರಲ್ಲ. ಆಗ ಅವರಿಗೆ ಹೇಳಿಕಳಿಸುತ್ತಾರೆ. ಕರೆಯ ಹೋದವರ ಕೈಯಲ್ಲಿ ಘಟಿವಾಳಯ್ಯನವರು ಒಂದು ಅರಿವೆಯಲ್ಲಿ ಒಂದು ಇದ್ದಲಿ ಮತ್ತು ಒಂದು ಇರುವೆ ಕಟ್ಟಿ ಕಳಿಸುತ್ತಾರೆ. ಅನುಭವ ಮಂಟಪದಲ್ಲಿ ಎಲ್ಲರಿಗೂ ಇದರ ಅರ್ಥವಾಗುತ್ತದೆ. ಅವರು ಕಟ್ಟಿ ಕಳಿಸಿದ್ದು ‘ಅರಿವು ಇದ್ದಲ್ಲಿ ಇರುವೆ’ ಎಂಬರ್ಥ.
ಎಲ್ಲಿ ಅರಿವು ಅನುಭಾವ ಇರುತ್ತದೆಯೋ ಅಲ್ಲಿ ನಾನಿರುವೆ ಎಂಬರ್ಥ ಅದಾಗಿತ್ತು. ಅದಕ್ಕೆ ಬಸವಾದಿ ಶರಣರು ಅನುಭಾವಕ್ಕೆ ಹೆಚ್ಚು ಮಹತ್ವ ಕೊಟ್ಟಿರುವರು. ಇಂದೂ ಎಲ್ಲ ಕಡೆ ಶಿವಾನುಭವ ನಡೆಸುವರು. ದೇವರ ದಾಸೀಮಯ್ಯ ಸಹ ತಿಳಿಸಿದ್ದಾರೆ. ನನಗೆ ಸಿರಿ-ಸಂಪತ್ತು, ಆನೆ-ಅಂಬಾರಿ ವೈಭವ, ರಾಜ ದರ್ಬಾರ ಕೊಟ್ಟರೂ ನನಗೆ ಬೇಡ. ನನಗೆ ಬೇಕಾಗಿದ್ದು ಶರಣರ ಅನುಭಾವ. ಅರ್ಧ ಘಳಿಗೆ ಸಿಕ್ಕರೆ ಸಾಕು ಎಂದು ಶಿವಾನುಭವದ ಬಗ್ಗೆ ತಿಳಿಸಿದ್ದಾರೆ.