

ಬೆಂಗಳೂರು: ಸಾಮಾನ್ಯವಾಗಿ ಅಮಾವಾಸ್ಯೆ ದಿನ ಏನಾದರೂ ಕೆಟ್ಟದ್ದಾಗುವ ಸಾಧ್ಯತೆ ಇರುತ್ತದೆ. ಮಾಟ-ಮಂತ್ರ, ವಾಮಾಚಾರದಂಥ ಪ್ರಯೋಗ ಮಾಡುವ ಕೆಲವರು ಅದಕ್ಕೂ ಸಾಮಾನ್ಯವಾಗಿ ಅಮಾವಾಸ್ಯೆಯ ಇರುಳನ್ನೇ ಆಯ್ಕೆ ಮಾಡಿಕೊಂಡಿರುತ್ತಾರೆ.
'ನಾಳೆ ಯಾವುದಕ್ಕೂ ಎಚ್ಚರಿಕೆಯಿಂದ ಇರುವುದು ಒಳ್ಳೆಯದು' ಎಂಬಂತೆ ವ್ಯಕ್ತಿಯೊಬ್ಬ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವುದು, ಕಾಕತಾಳೀಯ ಎಂಬಂತೆ ನಾಳೆ ಅಮಾವಾಸ್ಯೆಯೂ ಆಗಿರುವುದರಿಂದ ಈಗ ಆ ಪೋಸ್ಟ್ ಬಹಳಷ್ಟು ಪ್ರತಿಕ್ರಿಯೆ ಪಡೆಯಲಾರಂಭಿಸಿದೆ.
2023ರ ಅಕ್ಟೋಬರ್ 14ರಂದು ಭಾರತದಲ್ಲಿನ ಜನಸಂದಣಿಯ ಸ್ಥಳಕ್ಕೆ ಹೋಗುವುದನ್ನೂ ಆದಷ್ಟೂ ತಪ್ಪಿಸಿ. ಅದರಲ್ಲೂ ವಿಶೇಷವಾಗಿ ಪ್ರಮುಖ ಮಹಾನಗರಗಳಲ್ಲಿ ಎಂದಿರುವ ಆ ವ್ಯಕ್ತಿ, ಉಗ್ರರ ದಾಳಿ, ಕೋಮುಗಲಭೆ ಸಂಭವಿಸುವ ಸಾಧ್ಯತೆ ಇದೆ, ಜನರು ಎಚ್ಚರಿಕೆಯಿಂದಿರಿ ಎಂದು ಸೋಷಿಯಲ್ ಮೀಡಿಯಾ ತಾಣವಾದ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ತನ್ನ ಬಯೋದಲ್ಲಿ ಡೆವಿಲ್ ಆಸ್ಟ್ರಾಲಜರ್ ಎಂದು ಬರೆದುಕೊಂಡಿರುವ ಪ್ರಶಾಂತ್ ಕಿಣಿ ಎಂಬ ಈ ವ್ಯಕ್ತಿಯ ಪೋಸ್ಟ್ ಆತಂಕಕಾರಿಯಾಗಿದ್ದು, ಕೆಲವರು ಇದನ್ನು ಗಂಭೀರವಾಗಿ ಪರಿಗಣಿಸಿ ಆತಂಕ ವ್ಯಕ್ತಪಡಿಸಿ ಪ್ರತಿಕ್ರಿಯಿಸಿದ್ದಾರೆ.