

ಬೆಂಗಳೂರು: ಪ್ರಶ್ನೆ ಪತ್ರಿಕೆ ಸೋರಿಕೆ ಆದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಎಫ್ಡಿಎ ಎಕ್ಸಾಂಗೆ ಡೇಟ್ ಫಿಕ್ಸ್ ಆಗಿದೆ.
2020ರ ಜನವರಿ 31ರ ಅಧಿಸೂಚನೆಯನ್ವಯ ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2019ನೇ ಸಾಲಿನ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, 2021ರ ಜನವರಿ 24ರಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿಗದಿಪಡಿಸಲಾಗಿತ್ತು. ಪರೀಕ್ಷೆಗೂ ಮುನ್ನಾದಿನವೇ ಅಂದರೆ ಜ.23ರಂದೇ ಎರಡು ಅಧಿವೇಶನಗಳಲ್ಲಿ ನಡೆಯಬೇಕಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಜಿ.ಸತ್ಯವತಿ ಅವರು ಪರೀಕ್ಷೆ ಮುಂದೂಡಿದ್ದರು. ಇದೀಗ ಎಫ್ಡಿಎ ಪರೀಕ್ಷೆಗೆ ದಿನಾಂಕವನ್ನು ಮರುನಿಗದಿ ಮಾಡಲಾಗಿದ್ದು, ಇದೇ 28ರಂದು ಅಂದರೆ(ಫೆ.28ರಂದು) ಎಕ್ಸಾಂ ನಡೆಯಲಿದೆ.