ಮದ್ವೆಗೆ 4 ದಿನ ಬಾಕಿ ಇರುವಾಗಲೇ ವಿಡಿಯೋ ಹರಿಬಿಟ್ಟ ಮಗಳನ್ನು ಪೊಲೀಸರ ಮುಂದೆಯೇ ಗುಂಡಿಕ್ಕಿ ಕೊಂದ ತಂದೆ! Father shoots Daughter

Father shoots Daughter
Published on

Father shoots Daughter : ತನ್ನ ಮಗಳ ಮದುವೆಗೆ ಕೇವಲ ನಾಲ್ಕು ದಿನಗಳು ಬಾಕಿ ಇರುವಾಗಲೇ ಆಕೆಯ ಮೇಲೆ ತಂದೆ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ.

ಮೃತಳನ್ನು ತನು ಗುರ್ಜರ್ (20) ಎಂದು ಗುರುತಿಸಲಾಗಿದೆ. ಆರೋಪಿ ತಂದೆ ಮಹೇಶ್ ಗುರ್ಜರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಆಘಾತಕಾರಿ ಸಂಗತಿ ಏನೆಂದರೆ, ಮಹೇಶ್​, ಪೊಲೀಸರ ಮುಂದೆಯೇ ತನ್ನ ಮಗಳಿಗೆ ಗುಂಡಿಕ್ಕಿ ಕೊಲೆ ಮಾಡಿದ್ದಾನೆ.

ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ನಗರದ ಗೋಲಕ ಮಂದಿರ ಪ್ರದೇಶದಲ್ಲಿ ಈ ಕೊಲೆ ನಡೆದಿದೆ. ತನ್ನ ಕುಟುಂಬದವರು ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿ ತನು, 52 ಸೆಕೆಂಡುಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ನನ್ನ ಕುಟುಂಬದವರು ಪ್ರತಿದಿನ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಮತ್ತು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ನನಗೆ ಏನಾದರೂ ಸಂಭವಿಸಿದರೆ, ಅದಕ್ಕೆ ಕುಟುಂಬವೇ ಹೊಣೆಯಾಗಬೇಕಾಗುತ್ತದೆ ಎಂದು ತನು ಆರೋಪಿಸಿದ್ದಳು.

ಅಲ್ಲದೆ, ನಾನು ವಿಕ್ಕಿಯನ್ನು ಮದುವೆಯಾಗಲು ಬಯಸುತ್ತೇನೆ. ನಾವಿಬ್ಬರು ಆರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದೇವೆ ಎಂದು ಹೇಳಿದ್ದಳು. ವಿಡಿಯೋ ವೈರಲ್ ಆದ ನಂತರ, ಸೂಪರಿಂಟೆಂಡೆಂಟ್ ಧರ್ಮವೀರ್ ಸಿಂಗ್ ನೇತೃತ್ವದ ಪೊಲೀಸ್ ತಂಡ ತನು ಅವರ ಮನೆಗೆ ಧಾವಿಸಿತು. ಅಲ್ಲದೆ, ಹಿರಿಯರು ಕೂಡ ಸಮಸ್ಯೆಯನ್ನು ಪರಿಹರಿಸಲು ಮನೆಗೆ ತಲುಪಿದರು.

ಇನ್ನು ಮುಂದೆ ತನ್ನ ಕುಟುಂಬದೊಂದಿಗೆ ಇರಬಾರದು ಮತ್ತು ಸರ್ಕಾರ ನಡೆಸುವ ಆಶ್ರಯದಲ್ಲಿ ಇರಿಸಬೇಕೆಂದು ತನು ಪೊಲೀಸರನ್ನು ಕೇಳಿಕೊಂಡಳು. ಇದೇ ಸಂದರ್ಭದಲ್ಲಿ ಮಹೇಶ್ ತನ್ನ ಮಗಳೊಂದಿಗೆ ಸ್ವಲ್ಪ ಹೊತ್ತು ಒಬ್ಬಂಟಿಯಾಗಿ ಮಾತನಾಡಲು ಕೇಳಿಕೊಂಡರು. ತನ್ನ ಮಗಳನ್ನು ರೂಮಿನ ಒಳಗೆ ಕರೆದುಕೊಂಡು ಹೋದ ಮಹೇಶ್​, ದೇಶೀಯ ಬಂದೂಕಿನಿಂದ ಎದೆಗೆ ಗುಂಡು ಹಾರಿಸಿ ಕೊಂದಿದ್ದಾನೆ.

ತನು ಅವರ ಮದುವೆ ಇದೇ ಜನವರಿ 18 ರಂದು ನಿಗದಿಯಾಗಿತ್ತು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನು ತಂದೆ ಮಹೇಶ್​ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ತನು ಅವರ ಸಾಮಾಜಿಕ ಜಾಲತಾಣ ಖಾತೆಗಳನ್ನು ಸಹ ಪೊಲೀಸರು ಪರಿಶೀಲಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net