ತಂದೆ- ತಾಯಿ ಜಗಳದಲ್ಲಿ ಪುತ್ರ ಬಲಿ..!

murder (1)
Published on

ಬೆಂಗಳೂರು: ತಂದೆ- ತಾಯಿ ನಡುವಿನ ಜಗಳದಲ್ಲಿ ಮಗ ಕೊಲೆಯಾಗಿದ್ದು, ಆರೋಪಿ ತಂದೆಯನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಪುಟ್ಟೇನಹಳ್ಳಿಯ ಜರಗನಹಳ್ಳಿ ನಿವಾಸಿ ಬಿ. ಯಶವಂತ್ (23) ಮೃತ. ಪುತ್ರನನ್ನೇ ಕೊಲೆ ಮಾಡಿದ ಆರೋಪದ ಮೇಲೆ ಬಸವರಾಜು ಎಂಬಾತನನ್ನು ಬಂಧಿಸಲಾಗಿದೆ ಎಂದು ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಭರಮಪ್ಪ ಜಗಲಾಸರ್ ತಿಳಿಸಿದ್ದಾರೆ.\

ಬಸವರಾಜು ತನ್ನ ಪತ್ನಿ ಭಾಗ್ಯಲಕ್ಷ್ಮೀ, ಪುತ್ರ ಯಶವಂತ್, 19 ವರ್ಷದ ಪುತ್ರಿ ಹಾಗೂ ತಾಯಿ ಜತೆ ನೆಲೆಸಿದ್ದ. ಬಸವರಾಜು ಲಾರಿ ಡ್ರೈವರ್ ಆಗಿದ್ದರೆ, ಯಶವಂತ್ ಸ್‌ಟಾವೇರ್ ಕಂಪನಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ. ಪುತ್ರಿ ವ್ಯಾಸಂಗ ಮಾಡುತ್ತಿದ್ದಾರೆ. ಬಸವರಾಜು ತಾಯಿಗೆ ವಯಸ್ಸಾಗಿದ್ದು, ಹಾಸಿಗೆ ಹಿಡಿದಿದ್ದರು. ಕೌಟುಂಬಿಕ ವಿಚಾರಕ್ಕೆ ಬಸವರಾಜು- ಯಶವಂತ್ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಬುಧವಾರ ಬೆಳಗ್ಗೆ 9.30ರಲ್ಲಿ ಸಹ ದಂಪತಿ ನಡುವೆ ಜಗಳ ಶುರುವಾಗಿತ್ತು.

ಜಗಳ ವಿಕೋಪಕ್ಕೆ ತಿರುಗಿದಾಗ ಬಿಡಿಸಲು ಯಶವಂತ್ ಮಧ್ಯೆ ಹೋಗಿದ್ದ. ‘ನಮ್ಮ ನಡುವೆ ಬರಬೇಡ ಹೋಗು’ ಎಂದು ಪುತ್ರನನ್ನು ಬಸವರಾಜು ಜೋರಾಗಿ ತಳ್ಳಿದ್ದ. ಈ ವೇಳೆ ಅಡುಗೆ ಮನೆಯಲ್ಲಿದ್ದ ಚಾಕು ಹಿಡಿದು ಪತ್ನಿಗೆ ಚುಚ್ಚುತ್ತೇನೆ ಎಂದಾಗ ಪುತ್ರ ಅಡ್ಡ ಬಂದಿದ್ದ. ಆಗ ಆತನ ಎದೆಗೆ ಚುಚ್ಚಿ ತೀವ್ರ ರಕ್ತಸ್ರಾವವಾಯಿತು. ಕುಟುಂಬಸ್ಥರು ಯಶವಂತ್‌ನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರಾದರೂ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ ಎಂದು ವೈದ್ಯರು ದೃಢಪಡಿಸಿದರು. ವಿಷಯ ತಿಳಿದ ಪುಟ್ಟೇನಹಳ್ಳಿ ಪೊಲೀಸರು, ಸ್ಥಳಕ್ಕೆ ಬಂದು ಬಸವರಾಜುನನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net