

ಕರೀಂನಗರ: ಮಗಳ ಮದುವೆಯ ದಿನವೇ ತಂದೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತೆಲಂಗಾಣದ ಕರೀಂನಗರದಲ್ಲಿ ನಡೆದಿದೆ.
ಮೃತನನ್ನು ಎರ್ರಾಳ ರಾಮುಲು(48) ಎಂದು ಗುರುತಿಸಲಾಗಿದ್ದು, ಶಂಕರಪಟ್ಟಣ ಮಂಡಲದ ಅಂಬಲಪುರ ಗ್ರಾಮದ ನಿವಾಸಿ. ಟ್ರ್ಯಾಕ್ಟರ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ಈತನಿಗೆ ಮೂವರು ಹೆಣ್ಣುಮಕ್ಕಳಿದ್ದು, ಈ ಪೈಕಿ ಹಿರಿಯ ಮಗಳು ಲಾವಣ್ಯಳ ಮದುವೆ ಭಾನುವಾರ ಬೆಳಗ್ಗೆ ಹತ್ತು ಗಂಟೆಗೆ ಮದುವೆ ನಿಗದಿಯಾಗಿತ್ತು.
ಮುಹೂರ್ತಕ್ಕೆ ಇನ್ನೂ ಎರಡು ಗಂಟೆ ಬಾಕಿ ಇದ್ದು, ಇಡೀ ಮದುವೆ ಮಂಟಪ ಬಂಧುಗಳಿಂದ ತುಂಬಿ ತುಳುಕುತ್ತಿತ್ತು. ವಧು-ವರರು ಕೂಡ ಮಂಟಪವನ್ನು ಪ್ರವೇಶಿಸಲು ಸಿದ್ಧರಾಗಿದ್ದ ವೇಳೆ ರಾಮುಲು ಎದೆಯಲ್ಲಿ ನೋವು ಕಾಣಿಸಿಕೊಂಡು ಏಕಾಏಕಿ ಕುಸಿದು ಬಿದ್ದಿದ್ದಾನೆ. ಇದನ್ನು ಗಮನಿಸಿದ ಸಂಬಂಧಿಕರು ಕೂಡಲೇ ಹುಜೂರಾಬಾದ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು, ಆತನನ್ನು ಪರೀಕ್ಷಿಸಿದ ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಆತನ ನಿಧನದಿಂದಾಗಿ ಮದುವೆ ಮನೆ ಮಸಣವಾಗಿ ಮಾರ್ಪಟ್ಟಿದ್ದು, ಅಲ್ಲಿಯವರೆಗೂ ಇದ್ದ ಸಂತಸದ ಕ್ಷಣಗಳೆಲ್ಲ ಮರೆಯಾಗಿ ಆತನ ನಿಧನಕ್ಕೆ ಪತ್ನಿ, ಮಕ್ಕಳು, ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ. ತುಂಬಾ ಖುಷಿಯಿಂದ ನಡೆಯಬೇಕಿದ್ದ ಮನೆಯಲ್ಲಿ ಈ ಅನಿರೀಕ್ಷಿತ ಘಟನೆಯಿಂದಾಗಿ ಮದುವೆಯನ್ನು ಮುಂದೂಡಲಾಯಿತು.(ಏಜೆನ್ಸೀಸ್)