

ನವದೆಹಲಿ: ಬಹುತೇಕ ಬೇಡಿಕೆಗಳು ಈಡೇರಿರುವ ಕಾರಣ ರೈತ ಸಂಘಟನೆಗಳು ಪ್ರತಿಭಟನೆ ವಿಚಾರವಾಗಿ ನಿರ್ಣಾಯಕ ತೀರ್ಮಾನ ಬುಧವಾರ ಘೋಷಣೆಯಾಗುವ ನಿರೀಕ್ಷೆ ಇದೆ. ಕೆಲವು ರೈತ ನಾಯಕರ ಪ್ರಕಾರ ಪ್ರತಿಭಟನೆ ಬುಧವಾರವೇ ಅಂತ್ಯಗೊಳ್ಳಲಿದೆ. ಇದರ ಘೋಷಣೆಗೂ ಮುನ್ನ ಔಪಚಾರಿಕವಾಗಿ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ.
‘ನಮ್ಮ ಬಹುತೇಕ ಬೇಡಿಕೆಗಳು ಈಡೇರಿಕೆಯಾಗಿವೆ. ರೈತರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಸರ್ಕಾರದಿಂದ ಲಿಖಿತ ಭರವಸೆ ಸಿಕ್ಕಿದೆ. ಹೀಗಾಗಿ ರೈತ ಸಂಘಟನೆಗಳು ಒಂದು ನಿರ್ಧಾರಕ್ಕೆ ಬಂದಿವೆ. ಅಂತಿಮ ನಿರ್ಧಾರ ಬುಧವಾರ ಘೋಷಣೆಯಾಗಲಿದೆ’ ಎಂದು ರೈತ ನಾಯಕ ಕುಲವಂತ್ ಸಿಂಗ್ ಸಂಧು ತಿಳಿಸಿದ್ದಾರೆ. 40 ರೈತ ಸಂಘಟನೆಗಳ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ)ದ ಸಭೆಯ ಬಳಿಕ ಈ ಹೇಳಿಕೆ ನೀಡಿದ್ದಾರೆ .
ಸರ್ಕಾರದಿಂದ ಪ್ರಸ್ತಾವ: ಸರ್ಕಾರದ ಜತೆಗೆ ಮಾತುಕತೆ ನಡೆಸುವು ದಕ್ಕೆ ಎಸ್ಕೆಎಂ ತನ್ನ ಐವರು ಸದಸ್ಯರ ಸಮಿತಿಯನ್ನು ಶನಿವಾರ ಕಳುಹಿಸಿತ್ತು. ಅಲ್ಲಿ, ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ, ಮೃತ ರೈತರ ಕುಟುಂಬಕ್ಕೆ ಪರಿಹಾರ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಒಪ್ಪಿಕೊಂಡಿದೆ ಎನ್ನಲಾಗಿದ್ದು, ಈ ಕುರಿತ ಪ್ರಸ್ತಾವವನ್ನು ಎಸ್ಕೆಎಂಗೆ ಮಂಗಳವಾರ ಕಳುಹಿಸಿದೆ ಎನ್ನಲಾಗಿದೆ.
ವರ್ಷ ದಾಟಿದ ಪ್ರತಿಭಟನೆ: ಕಳೆದ ವರ್ಷ ಮುಂಗಾರು ಅಧಿ ವೇಶನದಲ್ಲಿ 3 ಹೊಸ ಕೃಷಿ ಮಸೂದೆಗಳನ್ನು ಸಂಸತ್ ಅಂಗೀಕರಿಸಿತ್ತು. ನಂತರ ಕಾನೂನು ಜಾರಿಯೂ ಆಗಿತ್ತು. ಇದರ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ 2020ರ ನವೆಂಬರ್ 26ರಂದು ಪ್ರತಿಭಟನೆ ಆರಂಭವಾಯಿತು. ದೆಹಲಿ ಗಡಿಗಳನ್ನು ಬಂದ್ ಮಾಡಿ ರೈತರು ಧರಣಿ ಕುಳಿತರು. ದೇಶದ ವಿವಿಧೆಡೆಯಲ್ಲೂ ಪ್ರತಿಭಟನೆ ವ್ಯಕ್ತವಾಯಿತು. ಸರ್ಕಾರ ಮತ್ತು ರೈತ ಮುಖಂಡರ ಮಧ್ಯೆ ಹಲವು ಸುತ್ತು ಮಾತುಕತೆ ನಡೆದರೂ ಬಿಕ್ಕಟ್ಟು ಬಗೆಹರಿಯಲಿಲ್ಲ. ವಿಷಯ ಸುಪ್ರೀಂಕೋರ್ಟ್ಗೂ ಹೋಯಿತು. ಸರ್ಕಾರ ಒಂದೂವರೆ ವರ್ಷದ ಕಾಯ್ದೆ ತಡೆಹಿಡಿಯುವ ಭರವಸೆ ನೀಡಿತು. ಆದರೆ ರೈತರು ಕಾಯ್ದೆ ರದ್ದತಿಯ ಬೇಡಿಕೆಯಿಂದ ಹಿಂದೆ ಸರಿದಿರಲಿಲ್ಲ. 3 ಕೃಷಿ ಕಾಯ್ದೆ ಹಿಂಪಡೆಯುವ ಮಸೂದೆಗೆ ಸಂಸತ್ ಇತ್ತೀಚೆಗೆ ಸಮ್ಮತಿಸಿತ್ತು. ಇದಕ್ಕೆ ರಾಷ್ಟ್ರಪತಿ ಅಂಕಿತ ದೊರಕಿದೆ.