ಬೆಳೆಗಾರರಿಗೆ ಮಧ್ಯವರ್ತಿಗಳಿಂದ ತೊಂದರೆ

srl
ಶಿರಾಳಕೊಪ್ಪದಲ್ಲಿ ರಾಜ್ಯ ರೈತ ಸಂಘದ ಸಭೆಯಲ್ಲಿ ಜಿಲ್ಲಾ ಗೌರವಾಧ್ಯಕ್ಷ ಪ್ಯಾಟಿ ಈರಣ್ಣ, ಕಾರ್ಯಾಧ್ಯಕ್ಷ ಪುಟ್ಟನ ಗೌಡ, ರಾಜಪ್ಪ ತಾಳಗುಂದ, ಹನುಮಂತ ರಾವ್ ಇದ್ದರು.
Published on

ಶಿರಾಳಕೊಪ್ಪ: ರೈತರು ಅಡಕೆ ಬೆಳೆಯನ್ನು ಮೂಲ ಬೆಳೆಯಾಗಿ ಕೃಷಿ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಲ ಮಧ್ಯವರ್ತಿಗಳು ಅಡಕೆ ಖರೀದಿಗೆ ಕೆಲವು ಷರತ್ತುಗಳನ್ನು ವಿಧಿಸಿ ರೈತರ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಪುಟ್ಟನಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಬೆಳಗ್ಗೆ ಸಭೆಯಲ್ಲಿ ಮಾತನಾಡಿದ ಅವರು. ಕಳೆದ ಕೆಲ ತಿಂಗಳಿನಿಂದ ಬೆರಳಣಿಕೆಯಷ್ಟು ಖರೀದಿದಾರರು ಜಿಲ್ಲಾ ಮಟ್ಟದಲ್ಲಿ ಚೇಣಿದಾರರ ವೇದಿಕೆ ಮಾಡಿಕೊಂಡು ರೈತರಿಗೆ ಕೆಲ ಷರತ್ತು ವಿಧಿಸಿ ಅಡಕೆ ಖರೀದಿಸಲು ಮುಂದಾಗಿದ್ದಾರೆ ಎಂದು ದೂರಿದರು.

ಒಂದು ಕ್ವಿಂಟಾಲ್ ಅಡಕೆಗೆ 10 ಕೆ.ಜಿ ಒಣ ಅಡಕೆ ಮತ್ತು ಒಂದು ಎಕರೆಗೆ ರೈತರಿಗೆ 25 ಸಾವಿರ ರೂ. ಮುಂಗಡ ನೀಡಬೇಕು. ಉತ್ತಮ ದರ್ಜೆಯ ಅಡಕೆ ಪಡೆಯಬೇಕು ಎಂದು ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅಡಕೆ ಬೆಳೆಗಾರರು ಇಂಥವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಸರಿಯಾಗಿ ವ್ಯಾಪಾರ ಮಾಡಬೇಕು. ಇಲ್ಲವಾದರೆ ರೈತ ಸಂಘದಿಂದ ಹೋರಾಟದ ಮೂಲಕ ಉತ್ತರ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾ ಗೌರವಾಧ್ಯಕ್ಷ ಈರಪ್ಪ ಪ್ಯಾಟಿ ಮಾತನಾಡಿ, ಇತ್ತೀಚಿಗೆ ಕೆಲವು ಖರೀದಿದಾರರು ಅಡಕೆ ಬೆಳೆಗಾರರ ತಲೆ ಮೇಲೆ ಚಪ್ಪಡಿ ಕಲ್ಲು ಎಳೆಯಲು ಮುಂದಾಗಿದ್ದಾರೆ. ಷರತ್ತುಗಳನ್ನು ಹಾಕಿ ರೈತರನ್ನು ಬ್ಲಾೃಕ್‌ಮೇಲ್ ಮಾಡುತ್ತಿದ್ದಾರೆ. ನಿಜವಾಗಿಯೂ ಇವರು ಅಸಲಿ ವ್ಯಾಪಾರಸ್ಥರಲ್ಲ ಎಂದರು.

ತಾಲೂಕು ಪ್ರಧಾನ ಕಾರ್ಯದರ್ಶಿ ರಾಜಪ್ಪ ತಾಳಗುಂದ ಮಾತನಾಡಿ, ರೈತರು ಪ್ರಕೃತಿ ವಿಕೋಪದಿಂದ ಈಗಾಗಲೇ ನಷ್ಟ ಅನುಭವಿಸುತ್ತಿದ್ದಾರೆ. ಕೇವಲ ಲಾಭದ ಉದ್ದೇಶಕ್ಕಾಗಿ ವೇದಿಕೆ ಮಾಡಿಕೊಂಡು ರೈತರನ್ನು ವಂಚಿಸುವ ಕೆಲಸ ಮಾಡಲು ಹೊರಟಿದ್ದಾರೆ ಎಂದು ದೂರಿದರು. ಗ್ರಾಮ ಘಟಕದ ಅಧ್ಯಕ್ಷ ಹನುಮಂತ ರಾವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net