ಪರಿಹಾರಕ್ಕೆ ರೈತರ ಪಟ್ಟು: ಮೃತಪಟ್ಟ ಅನ್ನದಾತರ ಕುಟುಂಬಕ್ಕೆ ಆಸರೆ, ಸಿಎಎಯತ್ತ ರೈತರ ಚಿತ್ತ

Nation
ಗಾಜಿಪುರ ಗಡಿಯ ಪ್ರತಿಭಟನಾ ಸ್ಥಳದಲ್ಲಿ ಸಭೆ ನಡೆಸಿದ ರೈತ ಮುಖಂಡರು.
Published on

ನವದೆಹಲಿ: ವಿವಾದಾತ್ಮಕ ಮೂರು ಕೃಷಿ ಕಾಯ್ದೆ ಹಿಂಪಡೆಯಲು ಪ್ರತಿಭಟನೆ ನಡೆಸಿ ಯಶಸ್ವಿಯಾಗಿರುವ ರೈತ ಸಂಘಟನೆಗಳು ಮೃತಪಟ್ಟ ಪ್ರತಿಭಟನಾಕಾರರ ಕುಟುಂಬಕ್ಕೆ ಪರಿಹಾರ ನೀಡುವಂತೆ ಪಟ್ಟು ಹಿಡಿದಿವೆ. ಮಾತ್ರವಲ್ಲದೆ, ಈಗ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಾಪಸು ವಿಷಯದಲ್ಲಿ ಪ್ರತಿಭಟನೆ ನಡೆಸಲು ಆಲೋಚಿಸುತ್ತಿವೆ. ಈ ಮಧ್ಯೆ ಮುಸ್ಲಿಂ ನಾಯಕರು, ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ಮರುಜಾರಿ ಮತ್ತು ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಹಿಂಪಡೆಯುವಂತೆಯೂ ಒತ್ತಾಯಿಸಿದ್ದಾರೆ.

ನವೆಂಬರ್ 29ರಂದು ಆರಂಭವಾಗಲಿರುವ ಸಂಸತ್​ನ ಚಳಿಗಾಲದ ಅಧಿವೇಶನದಲ್ಲಿ ಮೂರು ಕೃಷಿ ಕಾಯ್ದೆ ಹಿಂಪಡೆದಿರುವಂತೆ ಮಾಡಿದ ರೈತರ ಪ್ರತಿಭಟನೆಗೆ ಸಿಕ್ಕ ಜಯವನ್ನು ಇರಿಸಿಕೊಂಡು ಪ್ರತಿಪಕ್ಷಗಳು ಸರ್ಕಾರವನ್ನು ಟೀಕಿಸುವ ಸಾಧ್ಯತೆ ಇದೆ. ಜಮ್ಮು-ಕಾಶ್ಮೀರದ ನ್ಯಾಷನಲ್ ಕಾನ್ಪರೆನ್ಸ್ ಮತ್ತು ಪಿಡಿಪಿಗಳು 370ನೇ ವಿಧಿ ಮರುಜಾರಿಗೆ ಒತ್ತಾಯಿಸಿದರೆ, ಕಾಂಗ್ರೆಸ್, ಟಿಎಂಸಿ ಇನ್ನಿತರ ಪಕ್ಷಗಳು ಸಿಎಎ ರದ್ದತಿಗೆ ಆಗ್ರಹಿಸುವ ಸಾಧ್ಯತೆ ಇದೆ.

ಪ್ರತಿಭಟನೆ ಕುರಿತು ನಿರ್ಧಾರ ಕೈಗೊಳ್ಳಲು ರೈತ ಮುಖಂಡರ ಸಭೆ: ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರವನ್ನು ಪ್ರಧಾನಿ ಮೋದಿ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಯ ಮುಂದಿನ ದಿಕ್ಕುದಿಸೆಯ ಬಗ್ಗೆ ನಿರ್ಧರಿಸಲು ಸಂಯುಕ್ತ ಕಿಸಾನ್ ಮೋರ್ಚಾ (ಎಸ್​ಕೆಎಂ) ನೇತೃತ್ವದಲ್ಲಿ ರೈತರು ದೆಹಲಿ-ಹರಿಯಾಣದ ಸಿಂಘು ಗಡಿಯಲ್ಲಿ ಶನಿವಾರ ಸಭೆ ನಡೆಸಿದರು. ಒಂಬತ್ತು ಸದಸ್ಯರ ಕೋರ್ ಕಮಿಟಿ ಸಭೆ ಮತ್ತು ಪಂಜಾಬ್​ನ 32 ಸದಸ್ಯರಿರುವ ಸಮಿತಿ ಸಭೆಗಳು ನಡೆದಿವೆ.

ವಿವಾದಾತ್ಮಕ ಕಾಯ್ದೆಗಳನ್ನು ಸಂಸತ್​ನ ಚಳಿಗಾಲದ ಅಧಿವೇಶನದಲ್ಲಿ ಅಧಿಕೃತವಾಗಿ ಹಿಂಪಡೆಯುವವರೆಗೂ ದೆಹಲಿ ಗಡಿಯ ಆರು ಕಡೆ ನಡೆಯುತ್ತಿರುವ ಪ್ರತಿಭಟನೆ ಮುಂದುವರಿಯಲಿದೆ ಎಂದು ಎಸ್​ಕೆಎಂ ಮುಖಂಡ ದರ್ಶನ್ ಪಾಲ್ ಮತ್ತು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯಿತ್ ಶುಕ್ರವಾರ ಹೇಳಿದ್ದರು. ಹಾಗೆಯೇ ಎಂಎಸ್​ಪಿ ಬೇಡಿಕೆ ಕೂಡ ರೈತರಿಗೆ ಪ್ರಮುಖವಾದುದು. ಈ ಬಗ್ಗೆ ಸರ್ಕಾರದಿಂದ ಖಚಿತ ನಿರ್ಧಾರ ಆಗಬೇಕಿದೆ. ಜತೆಗೆ ಪ್ರತಿಭಟನಾ ಸಮಯದಲ್ಲಿ ಮರಣಿಸಿದ 700ಕ್ಕೂ ಹೆಚ್ಚು ರೈತರ ಕುಟುಂಬಗಳಿಗೆ ಆಸರೆ ನೀಡುವುದು ಸರ್ಕಾರದ ಕರ್ತವ್ಯ. ಜತೆಗೆ ವಿವಾದಾತ್ಮಕವಾದ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಕೈಬಿಡಬೇಕು ಎಂದಿದ್ದರು.

ಗಾಜಿಪುರ ಗಡಿಯಿಂದ ವಾಪಸಾಗುತ್ತಿರುವ ರೈತರು: ಪ್ರಧಾನಿ ಮೋದಿ ಮೂರು ಕೃಷಿ ಕಾಯ್ದೆಯನ್ನು ಹಿಂಪಡೆಯುವ ಘೋಷಣೆ ಮಾಡಿದ ಬಳಿಕ ಗಾಜಿಪುರ್ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ವಾಪಸಾಗುತ್ತಿದ್ದಾರೆ.

3 ಲಕ್ಷ ರೂ. ಪರಿಹಾರ ಘೋಷಿಸಿದ ಕೆಸಿಆರ್: ಮೂರು ಕೃಷಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆಯಲ್ಲಿ ಮೃತ ಪಟ್ಟ ರಾಜ್ಯದ ರೈತರ ಕುಟುಂಬಕ್ಕೆ ತಲಾ 3 ಲಕ್ಷ ರೂಪಾಯಿ ಪರಿಹಾರವನ್ನು ತೆಲಂಗಾಣದ ಸಿಎಂ ಕೆ.ಚಂದ್ರಶೇಖರ್ ರಾವ್ ಘೋಷಿಸಿದ್ದಾರೆ. ಕೇಂದ್ರ ಸರ್ಕಾರ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

29ರ ಟ್ರ್ಯಾಕ್ಟರ್ ರ‍್ಯಾಲಿ ಹಿಂಪಡೆದಿಲ್ಲ: ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿರುವ ನ.29ರಂದು ಹಮ್ಮಿಕೊಂಡಿರುವ ಟ್ರಾ್ಯಕ್ಟರ್ ರ‍್ಯಾಲಿ ಹಿಂಪಡೆಯವ ಬಗ್ಗೆ ಯಾವುದೇ ನಿರ್ಧಾರ ಆಗಿಲ್ಲ ಎಂದು ರೈತ ಮುಖಂಡರು ಹೇಳಿದ್ದಾರೆ. ಆದರೆ, ಎಂಎಸ್​ಪಿ ಖಾತ್ರಿ ಆಗುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಬಿಕೆಯು ಮುಖಂಡ ರಾಕೇಶ್ ಟಿಕಾಯಿತ್ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರ ನಡೆಸುತ್ತಿರುವ ಪ್ರತಿಭಟನೆಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಧಿವೇಶನ ಆರಂಭದ ದಿನ ದೆಹಲಿಯಲ್ಲಿ ಟ್ರಾ್ಯಕ್ಟರ್ ರ‍್ಯಾಲಿ ನಡೆಸಲಾಗುವುದು. ಇದರಲ್ಲಿ 500 ರೈತರು ಭಾಗವಹಿಸಿಲಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿತ್ತು. ಆದರೀಗ ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ಘೋಷಣೆ ಮಾಡಿದ್ದಾರೆ. ಹೀಗಾಗಿ ಈ ರ‍್ಯಾಲಿ ನಡೆಯುವುದು ಅನುಮಾನ ಆಗಿದೆ.

ನಿರ್ಧಾರ ಬೇಗ ಆಗಿದ್ದರೆ 700 ಜೀವ ಉಳಿಯುತ್ತಿತ್ತು: ವಿವಾದಾತ್ಮಕವಾಗಿದ್ದ ಮೂರು ಕೃಷಿ ಕಾಯ್ದೆಯನ್ನು ಬೇಗನೆ ಹಿಂಪಡೆದಿದ್ದರೆ ಮುಗ್ಧ 700 ರೈತರ ಅಮೂಲ್ಯ ಜೀವ ಉಳಿಯುತ್ತಿತ್ತು ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಬರೆದಿರುವ ಬಹಿರಂಗ ಪತ್ರದಲ್ಲಿ ಹೇಳಿದ್ದಾರೆ. ನಾಲ್ಕು ಒತ್ತಾಯಗಳನ್ನೂ ಮಾಡಿರುವ ಅವರು, ಪ್ರತಿಭಟನೆ ವೇಳೆ ಮೃತರಾದ 700 ರೈತರ ಕುಟುಂಬಗಳಿಗೆ ತಲಾ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು. ರಾಜಕೀಯ ಪ್ರೇರಿತವಾಗಿ ರೈತರ ವಿರುದ್ಧ ದಾಖಲಿಸಿರುವ ಸುಳ್ಳು ಪ್ರಕರಣಗಳನ್ನು ತಕ್ಷಣವೇ ಕೈಬಿಡಬೇಕು. ರೈತರ ಬೇಡಿಕೆಯಂತೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್​ಪಿ) ಶಾಸನಾತ್ಮಕವಾಗಿ ಖಾತ್ರಿ ಪಡಿಸಬೇಕು ಮತ್ತು ಉತ್ತರ ಪ್ರದೇಶದ ಲಂಖಿಪುರ ಖೇರಿಯಲ್ಲಿ ಅ. 3ರಂದು ನಡೆದ ಹಿಂಸಾಚಾರದ ಘಟನೆ ಪ್ರಜಾಪ್ರಭುತ್ವಕ್ಕೆ ಕಳಂಕ. ಇದಕ್ಕೆ ಕಾರಣರಾದ ಕೇಂದ್ರ ಸಚಿವರ ವಿರುದ್ಧವೂ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ‘ವಿಶಾಲ ಹೃದಯದವರಾದ ನೀವು (ಪ್ರಧಾನಿ ಮೋದಿ) 3 ಕೃಷಿ ಕಾಯ್ದೆ ಹಿಂಪಡೆಯುವ ನಿರ್ಧಾರವನ್ನು ಮುಂಚೆಯೇ ತೆಗೆದುಕೊಂಡಿದ್ದರೆ ನಮ್ಮ 700 ರೈತ ಬಂಧುಗಳ ಜೀವ ಉಳಿಯುತ್ತಿತ್ತು. ಚಳಿ, ಮಳೆ, ಬಿಸಿಲೆನ್ನದೆ ಸುಮಾರು ಒಂದು ವರ್ಷ ರೈತರು ಹರತಾಳ ನಡೆಸಬೇಕಾದ ಪ್ರಮೇಯ ಇರುತ್ತಿರಲಿಲ್ಲ’ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net