

ಹೊಸದಿಲ್ಲಿ: ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿರುವ ರೈತ ಸಂಘಗಳು ಇಂದು ಬೃಹತ್ ಭಾರತ್ ಬಂದ್‌ಗೆ ಕರೆ ನೀಡಿದ್ದು, ದೆಹಲಿಗೆ ತೆರಳದಂತೆ ಗಡಿಗಳಲ್ಲಿ ಹಾಕಿರುವ ನಿರ್ಬಂಧ ಹಾಗೂ ಸೆಕ್ಷನ್ 144 ಜಾರಿಗೊಳಿಸಿರುವುದನ್ನು ಖಂಡಿಸಿ ಪ್ರತಿಭಟಿಸಲು ಮುಂದಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾ (SKM) ಸೇರಿದಂತೆ ವಿವಿಧ ರೈತ ಸಂಘಗಳು ತಮ್ಮ ಬೇಡಿಕೆಗಳನ್ನು ಕೇಂದ್ರದ ಮುಂದೆ ಒತ್ತಾಯಿಸುವ ಸಲುವಾಗಿ ಫೆಬ್ರವರಿ 16ರಂದು ದೇಶವ್ಯಾಪಿ ಮುಷ್ಕರಕ್ಕೆ ಗ್ರಾಮೀಣ ಭಾರತ್ ಬಂದ್‌ಗೆ ಕರೆ ನೀಡಿವೆ. ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್‌ನಲ್ಲಿ ಎಲ್ಲಾ ಸಮಾನ ಮನಸ್ಕ ರೈತ ಸಂಘಟನೆಗಳು ಒಗ್ಗೂಡಿ ಪಾಲ್ಗೊಳ್ಳುವಂತೆ ಎಸ್‌ಕೆಎಂ ವಿನಂತಿಸಿದೆ.
ಹರಿಯಾಣ, ಪಂಜಾಬ್‌ನಿಂದ ಮೆರವಣಿಗೆ ಹೊರಟು ದೆಹಲಿಯಿಂದ 200 ಕಿಲೋಮೀಟರ್ ದೂರದಲ್ಲಿರುವ ಅಂಬಾಲಾ ಬಳಿ ಹರಿಯಾಣ ಗಡಿಯಲ್ಲಿ ನೂರಾರು ರೈತರ 'ದೆಹಲಿ ಚಲೋ' ಪ್ರತಿಭಟನೆಯ ನಡುವೆ ಭಾರತ್ ಬಂದ್ ಕರೆ ಬಂದಿದೆ. ಪ್ರತಿಭಟನಾ ನಿರತ ರೈತರನ್ನು ಚದುರಿಸಲು ಹರಿಯಾಣ ಭದ್ರತಾ ಪಡೆಗಳು ಅಶ್ರುವಾಯು ಕೂಡ ಪ್ರಯೋಗಿಸಲು ಮುಂದಾಗಿದೆ.
ಎಲ್ಲಾ ಸಮಾನ ಮನಸ್ಕ ರೈತ ಸಂಘಟನೆಗಳು ಮುಂದೆ ಬಂದು ಭಾರತ್ ಬಂದ್‌ನಲ್ಲಿ ಭಾಗವಹಿಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಕೇಳಿಕೊಂಡಿದ್ದು, ಇಂದು ಬೆಳಗ್ಗೆ 6ರಿಂದ ಸಂಜೆ 4ರವರೆಗೆ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದೆ.
ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ಭಾರತದಾದ್ಯಂತ ಪ್ರಮುಖ ರಸ್ತೆಗಳಲ್ಲಿ ನಡೆಯುವ ಪ್ರತಿಭಟನೆ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಪಂಜಾಬ್‌ನಲ್ಲಿ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಕನಿಷ್ಠ ನಾಲ್ಕು ಗಂಟೆಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ,(ಏಜೆನ್ಸೀಸ್).