

ಬೆಂಗಳೂರು: ಕೃಷಿ ಕಾನೂನು ಹಿಂಪಡೆಗೆ ಆಗ್ರಹಿಸಿ ದೇಶಾದ್ಯಂತ ರೈಲು ತಡೆ ಚಳವಳಿ ನಡೆಯುತ್ತಿದ್ದು, ರಾಜ್ಯದಲ್ಲೂ ಪ್ರತಿಭಟನೆ ಜೋರಾಗಿದೆ.
ಸಂಯುಕ್ತ ಕಿಸಾನ್ ಮೋರ್ಚಾ ಗುರುವಾರ ರೈಲ್ ರೋಕೊ ಚಳವಳಿ ನಡೆಸುವಂತೆ ನೀಡಿದ್ದ ಕರೆಗೆ ಓಗೊಟ್ಟ ರೈತರು ಹುಬ್ಬಳ್ಳಿ, ಬೆಳಗಾವಿ, ಬೀದರ್, ಬೆಂಗಳೂರಿನ ಯಶವಂತಪುರ, ರಾಯಚೂರು, ಯಾದಗಿರಿ, ಧಾರವಾಡ ಸೇರಿದಂತೆ ಹಲವು ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಕೇಂದ್ರದ ವಿರುದ್ಧ ಘೋಷಣೆ ಕೂಗಿದರು. ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ರೈಲು ತಡೆ ಯತ್ನಕ್ಕೆ ಅಡ್ಡಬಂದ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆದಿದೆ. ಬ್ಯಾರಿಕೇಡ್ಗಳನ್ನು ಕಿತ್ತೆಸೆದು ಒಳನುಗ್ಗಲು ಯತ್ನಿಸಿದ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಲ್ಲೆಲ್ಲಿ ಏನಾಯ್ತು? ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಬೆಳಗಾವಿಯಲ್ಲಿ ಹೈಡ್ರಾಮ!: ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ತಡೆಯಲು ಯತ್ನಿಸಿದ ರೈತರನ್ನ ವಶಕ್ಕೆ ಪಡೆದ ಪೊಲೀಸರು ಒತ್ತಾಯ ಪೂರ್ವಕವಾಗಿ ಪೊಲೀಸ್ ವಾಹನಕ್ಕೆ ಹಾಕಿದರು. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ವಾಗ್ವಾದ ನಡೆಯಿತು.
ಬೀದರ್ನಲ್ಲಿ ಆಕ್ರೋಶ: ಬೀದರ್ ರೈಲ್ವೆ ನಿಲ್ದಾಣದ ಮುಂಭಾಗವೇ ಪ್ರತಿಭಟನೆಗೆ ಕುಳಿತ ರೈತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಬೀದರ್- ಬೆಂಗಳೂರು ರೈಲು ತಡೆಯಲು ಮುಂದಾದ ರೈತರನ್ನು ಪೊಲೀಸರು ತಡೆದರು. ನಿಲ್ದಾಣಕ್ಕೆ ನುಗ್ಗಲು ಹೋದವರನ್ನ ತಡೆದ ಪೊಲೀಸರ ವಿರುದ್ಧ ರೈತರು ಘೋಷಣೆ ಕೂಗುತ್ತಾ ಆಕ್ರೋಶ ಹೊರಹಾಕಿದರು.
ರಾಯಚೂರಲ್ಲಿ ಬ್ಯಾರಿಕೇಡ್ ಕಿತ್ತೆಸೆದರು: ರಾಯಚೂರಿನ ರೈಲ್ವೆ ನಿಲ್ದಾಣದ ಬಳಿ ಪೊಲೀಸರು ಹಾಗೂ ಹೋರಾಟಗಾರರ ನಡುವೆ ನೂಕಾಟ-ತಳ್ಳಾಟ ನಡೆದಿದೆ. ರೈಲ್ವೆ ನಿಲ್ದಾಣಕ್ಕೆ ಹೋಗದಂತೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. ಬ್ಯಾರಿಕೇಡ್ ದಾಟಿ ರೈಲ್ವೆ ನಿಲ್ದಾಣಕ್ಕೆ ನುಗ್ಗಲು ಪ್ರತಿಭಟನಾಕಾರರು ಯತ್ನಿಸಿದ್ದು, ಇದನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬ್ಯಾರಿಕೇಡ್ ನೂಕಿ ರೈಲ್ವೆ ನಿಲ್ದಾಣದೊಳಗೆ ರೈತರು ನುಗ್ಗಿದರು.
ಹಲವೆಡೆ ಹೋರಾಟ: ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ನಿಲ್ದಾಣದ ಹೊರಗೆ ರೈತಪರ ಹಾಗೂ ಕಾರ್ಮಿಕ, ದಲಿತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಧಾರವಾಡ, ಹೊಸಪೇಟೆ, ತುಮಕೂರು ಮೈಸೂರಿನಲ್ಲೂ ಪ್ರತಿಭಟನೆ ನಡೆಯುತ್ತಿದೆ. (ಇದಿಷ್ಟು ಮಾಹಿತಿ ಮಧ್ಯಾಹ್ನ 12.45ರವರೆಗಿನ ಅಪ್ಡೇಟ್)