

ಅಜ್ಜಂಪುರ: ಸಾಲ ಬಾಧೆಯಿಂದ ಮತ್ತೊಬ್ಬ ರೈತ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಡೂರು ತಾಲೂಕು ಚಿಕ್ಕನಲ್ಲೂರು ಗ್ರಾಮದ ರೈತ ಪರಮೇಶ್ವರಪ್ಪ(52) ಮೃತ ದುರ್ದೈವಿ.
ಇವರು ಗಿರಿಯಾಪುರ ಸಹಕಾರ ಸಂಘದಲ್ಲಿ 1.5 ಲಕ್ಷ, ಚಿಕ್ಕನಲ್ಲೂರು ಭುವನೇಶ್ವರಿ ಸ್ವಸಹಾಯ ಸಂಘದಲ್ಲಿ 60 ಸಾವಿರ, ಗ್ರಾಮಸ್ಥರ ಬಳಿ 30 ಸಾವಿರ ಕೈ ಸಾಲ ಸೇರಿ ಒಟ್ಟು 5 ಲಕ್ಷ ರೂ. ಸಾಲ ಮಾಡಿ ಜಮೀನಿನಲ್ಲಿ ಈರುಳ್ಳಿ ಹಾಕಿದ್ದರು. ಮಳೆ ಬಾರದ ಕಾರಣ ಈರುಳ್ಳಿ ಬೆಳೆ ಒಣಗಿಹೋಗುತ್ತಿರುವ ಬಗ್ಗೆ ಪತ್ನಿ ಬಳಿ ಅಳಲು ತೋಡಿಕೊಂಡಿದ್ದರು. ಈ ವರ್ಷ ಮಳೆ ಬಾರದೆ ಬೆಳೆಯೆಲ್ಲ ನಾಶವಾಗಿ ಆದಾಯ ಬರುವುದಿಲ್ಲವೆಂದು ಮುಂದಿನ ದಿನಗಳಲ್ಲಿ ಜೀವನ ಸಾಗಿಸುವುದು ದುಸ್ತರ ಎಂದು ಮನನೊಂದು ಮನೆಯಲ್ಲಿ ಸೀರೆ ಹಾಗೂ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅಜ್ಜಂಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಜಮೀನು ಅಭಿವೃದ್ಧಿಗಾಗಿ ಮಾಡಿದ್ದ ಸಾಲ ತೀರಿಸಲಾಗದೆ ಎನ್.ಆರ್.ಪುರ ತಾಲೂಕು ವರ್ಕಾಟೆ ಗ್ರಾಮದ ರೈತ ಲಕ್ಷಣ್ ಗುರುವಾರ ನೇಣಿಗೆ ಶರಣಾಗಿದ್ದರು.