

ಕರೊನಾ ಹರಡುವಿಕೆ ಪ್ರಮಾಣ ದಿನೇದಿನೆ ಹೆಚ್ಚಾಗುತ್ತಿದೆ. ಅದರಲ್ಲೂ ಮಹಾರಾಷ್ಟ್ರದ ಮುಂಬೈನಲ್ಲಿ ಹೆಚ್ಚು ಜನ ಈ ಸೋಂಕಿಗೆ ಗುರಿಯಾಗುತ್ತಿದ್ದಾರೆ. ಬಾಲಿವುಡ್ ಮಂದಿಯನ್ನೂ ಈ ಸೋಂಕು ಬಿಟ್ಟಿಲ್ಲ. ಒಬ್ಬರಾದ ಮೇಲೆ ಒಬ್ಬರಂತೆ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅದರಲ್ಲೂ ಸಿನಿಮಾ ಮಂದಿಯ ಭದ್ರತಾ ಸಿಬ್ಬಂದಿಗೆ ಈ ಸೋಂಕು ಹೆಚ್ಚೆಚ್ಚು ಕಂಡು ಬರುತ್ತಿದೆ. ಇದೀಗ ಬಾಲಿವುಡ್ ನಟ ಫರ್ಹಾನ್ ಅಖ್ತರ್ ಮನೆಯ ಭದ್ರತಾ ಸಿಬ್ಬಂದಿಗೆ ಕರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಹೌದು, ಮುಂಬೈನ ಬಾಂದ್ರಾ ಬಳಿಯಲ್ಲಿ ನಟ ಫರ್ಹಾನ್ ಅಖ್ತರ್ ಮನೆಯಿದೆ. ಆ ಮನೆಯಲ್ಲಿಯೇ ಫರ್ಹಾನ್ ಮತ್ತು ಕುಟುಂಬ ವಾಸವಿದೆ. ಇದೀಗ ಅದೇ ಮನೆಯ ಭದ್ರತಾ ಸಿಬ್ಬಂದಿಗೆ ಕರೊನಾ ದೃಢಪಟ್ಟಿದ್ದು, ಆತಂಕ ಸೃಷ್ಟಿಯಾಗಿದೆ. ಅಂದಹಾಗೆ, ಇತ್ತೀಚೆಗಷ್ಟೇ ನಟಿ ರೇಖಾ ಮನೆಯ ಹಲವು ಭದ್ರತಾ ಸಿಬ್ಬಂದಿಗೆ ಕರೊನಾ ಇರುವುದು ಖಚಿತವಾಗಿತ್ತು. ಇದೀಗ ಫರ್ಹಾನ್ ಅಖ್ತರ್ ಮನೆಯ ಸಿಬ್ಬಂದಿಗೆ ಕರೊನಾ ಬರಲು ರೇಖಾ ಅವರ ಮನೆಯ ಭದ್ರತಾ ಸಿಬ್ಬಂದಿ ಎಂದೇ ಹೇಳಲಾಗುತ್ತಿದೆ.
ಇದನ್ನೂ ಓದಿ: ಹರಿಪ್ರಿಯಾಗೆ ಇಂದು ಏನು ಸಿಕ್ತು ಗೊತ್ತಾ?
ಬಾಂದ್ರಾದಲ್ಲಿ ಫರ್ಹಾನ್ ಮನೆ ಮತ್ತು ರೇಖಾ ಮನೆಗೆ ಹೆಚ್ಚು ಅಂತರವಿಲ್ಲ. ಹೀಗಿರುವಾಗ ಎರಡೂ ಮನೆಯ ಭದ್ರತಾ ಸಿಬ್ಬಂದಿ ಪರಸ್ಪರ ಸಂಪರ್ಕದಲ್ಲಿರಬಹುದು. ಆ ಕಾರಣಕ್ಕೆ ಕರೊನಾ ಬಂದಿರಬಹುದು ಎನ್ನಲಾಗುತ್ತಿದೆ. ಸದ್ಯ ಕರೊನಾ ತಗುಲಿರುವ ಭದ್ರತಾ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶೀಘ್ರದಲ್ಲಿ ಫರ್ಹಾನ್ ಸಹ ಪರೀಕ್ಷೆಗೆ ಒಳಪಡಲಿದ್ದಾರೆ. (ಏಜೆನ್ಸೀಸ್)