

2020 ನಿಜಕ್ಕೂ ಅಚ್ಚರಿಯ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿದೆ. ಕರೊನಾ ಅನ್ನೋ ಮಹಾಮಾರಿ ಅರ್ಥ ವ್ಯವಸ್ಥೆಯನ್ನೇ ಬುಡಮೇಲು ಮಾಡಿದರೆ, ಭಾರತೀಯ ಚಿತ್ರರಂಗದ ಘಟಾನುಘಟಿಗಳು ಅಸುನೀಗಿದ್ದಾರೆ. ಅದರಲ್ಲೂ ಬಾಲಿವುಡ್ ನಟ ಸುಶಾಂತ್ ಆತ್ಮಹತ್ಯೆಗೆ ಶರಣಾಗಿ ಎರಡು ತಿಂಗಳ ಮೇಲಾಯಿತು. ಅವರ ಸಾವಿನ ತನಿಖೆ ಇನ್ನೂ ಚಾಲ್ತಿಯಲ್ಲಿದೆ. ರೀಲ್ ಧೋನಿಯನ್ನು ಕಳೆದುಕೊಂಡಿದ್ದ ಅಭಿಮಾನಿಗಳು, ರಿಯಲ್ ಧೋನಿ ನಿರ್ಧಾರಕ್ಕೂ ಕೊಂಚ ಬೇಸರಿಸಿಕೊಂಡಿದ್ದಾರೆ. ಬ್ಲೂ ಜೆರ್ಸಿಯಲ್ಲಿ ಇನ್ನು ಮುಂದೆ ಧೋನಿ ಕಾಣಿಸುವುದಿಲ್ಲ ಎಂಬುದನ್ನು ಧೋನಿ ಅಧಿಕೃತ ಮಾಡುತ್ತಿದ್ದಂತೆ, ಇಡೀ ಕ್ರಿಕೆಟ್ ಲೋಕ ಒಂದು ಕ್ಷಣ ಸ್ತಬ್ಧವಾಗಿತ್ತು. ಇತ್ತ ಸೋಷಿಯಲ್ ಮೀಡಿಯಾದಲ್ಲಿ ಧೋನಿಯ ಸಾಧನೆಯ ನೆನಪುಗಳು ಹರಿದಾಡ ತೊಡಗಿದವು.
ಎಂ ಎಸ್ ಧೋನಿ; ದಿ ಅನ್ಟೋಲ್ಡ್ ಸ್ಟೋರಿ ಸಿನಿಮಾದ ದೃಶ್ಯವೊಂದನ್ನು ಶೇರ್ ಮಾಡಿಕೊಂಡ ಅಭಿಮಾನಿಯೊಬ್ಬ, ಇನ್ನು ಮುಂದೆ ರೀಲ್ ಧೋನಿ ಮತ್ತು ರಿಯಲ್ ಧೋನಿಯನ್ನು ಬ್ಲೂ ಜೆರ್ಸಿಯಲ್ಲಿ ನೋಡಲು ಆಗುವುದಿಲ್ಲ. ಇನ್ನೋರ್ವ ಅಭಿಮಾನಿ, ಜೂನ್ 14ರಂದು ರೀಲ್ ಧೋನಿ ಶಾಶ್ವತವಾಗಿ ಗುಡ್ಬೈ ಹೇಳಿ ಹೊರಟ, ಇದೀಗ ಆಗಸ್ಟ್ 15ಕ್ಕೆ ರಿಯಲ್ ಧೋನಿ ಅಂತಾರಾಷ್ಟ್ರಿಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ. ಈ ಇಬ್ಬರ ಕಾಲಾವಧಿ ಮಾತ್ರ ಸದಾ ನೆನಪಿನಲ್ಲಿ ಉಳಿಯುವಂಥದ್ದು ಎಂದಿದ್ದಾರೆ. ಹೀಗೆ ಸಾವಿರಾರು ಮಂದಿ ಬಗೆಬಗೆ ರೀತಿಯಲ್ಲಿ ಈ ಇಬ್ಬರು ಧೋನಿಯನ್ನು ನೆನಪು ಮಾಡಿಕೊಂಡಿದ್ದಾರೆ. ಆ ನೆನಪುಗಳು ಝಲಕ್ ಇಲ್ಲಿದೆ.