ಹೆಡ್-ಬುಷ್ ಆಡ್ತಿದ್ದಾರೆ ಧನಂಜಯ್: ಆರು ಭಾಷೆಗಳಲ್ಲಿ ಜಯರಾಜ್​ನ ದಾದಾಗಿರಿಯ ದಿನಗಳು

Head Bush Dhananjaya
Published on

ಬೆಂಗಳೂರು: ಈ ಆಟದ ಬಗ್ಗೆ ಈಗ ಅದೆಷ್ಟು ಜನರಿಗೆ ಗೊತ್ತಿದೆಯೋ ಗೊತ್ತಿಲ್ಲ. ಆದರೆ, ಒಂದು ಕಾಲದಲ್ಲಿ ಹೆಡ್-ಬುಷ್ ಎನ್ನುವುದು ಜನಪ್ರಿಯ ಆಟ. ಟಾಸ್ ಹಾಕಿ ಹೆಡ್ಡೋ, ಬುಷ್​ಷೋ ಎಂದು ಬಾಜಿ ಕಟ್ಟಲಾಗುತ್ತಿದ್ದ ಈ ಆಟದಲ್ಲಿ ಲಕ್ಷಲಕ್ಷ ಗೆದ್ದವರೂ ಉಂಟು, ಸೋತವರೂ ಉಂಟು. ಈಗ ಅದೇ ‘ಹೆಡ್-ಬುಷ್’ ಅಂಡರ್​ವರ್ಲ್ಡ್ ಹಿನ್ನೆಲೆಯ ಚಿತ್ರವೊಂದಕ್ಕೆ ಶೀರ್ಷಿಕೆಯಾಗಿದೆ.

ಬೆಂಗಳೂರಿನ ಮಾಜಿ ಡಾನ್ ಎಂ.ಪಿ. ಜಯರಾಜ್ ಕುರಿತು ಸಿನಿಮಾ ಆಗುತ್ತಿರುವುದು, ‘ಅಗ್ನಿ’ ಕಥೆ-ಚಿತ್ರಕಥೆ ಬರೆಯುತ್ತಿರುವುದು, ಜಯರಾಜ್ ಪಾತ್ರದಲ್ಲಿ ಧನಂಜಯ್ ಕಾಣಿಸಿಕೊಳ್ಳುತ್ತಿರುವುದು ... ಇವೆಲ್ಲಾ ಹಳೆಯ ಸುದ್ದಿ. ಈ ಚಿತ್ರ ನವೆಂಬರ್​ನಲ್ಲಿ ಪ್ರಾರಂಭವಾಗಲಿದ್ದು, ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶೀರ್ಷಿಕೆ ಅನಾವರಣ ಮಾಡಲಾಗಿದೆ. ಅಂದಹಾಗೆ, ಟೈಟಲ್ ರಿಲೀಸ್ ಮಾಡಿದವರು ಪುನೀತ್ ರಾಜಕುಮಾರ್.

ಜಯರಾಜ್ ಅವರ ಕಥೆಗೂ, ಈ ಹೆಡ್-ಬುಷ್​ಗೂ ಏನು ಸಂಬಂಧ ಎಂಬ ಪ್ರಶ್ನೆ ಸಹಜ. ಆದರೆ, ಈ ರಹಸ್ಯ ಬಿಟ್ಟುಕೊಡುವುದಿಲ್ಲ ಧನಂಜಯ್. ‘ಚಿತ್ರದ ಕಾನ್ಸೆಪ್ಟ್​ಗೆ ಈ ಶೀರ್ಷಿಕೆ ಸೂಕ್ತ. ಇನ್ನು ಜಯರಾಜ್ ಅವರ ಬಯೋಪಿಕ್ ಅಂದರೆ ಬಹಳ ವಿಷಯಗಳು ಬರುತ್ತವೆ. ಅಂಡರ್​ವರ್ಲ್ಡ್ ಜತೆಗೆ ರಾಜಕೀಯ ಸಹ ಇರುತ್ತೆ. ಅದಕ್ಕೆ ಹೊಂದುವಂತೆ ಈ ಟೈಟಲ್ ಇಡಲಾಗಿದೆ’ ಎನ್ನುತ್ತಾರೆ ಧನಂಜಯ್.

‘ಅಗ್ನಿ’ ಶ್ರೀಧರ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರುವ ಈ ಚಿತ್ರ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಆರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಹಿಂದಿನ ಚಿತ್ರಗಳು ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾದರೆ, ಈ ಚಿತ್ರ ಅವೆಲ್ಲದರ ಜತೆಗೆ ಇಂಗ್ಲೀಷ್​ನಲ್ಲೂ ರಿಲೀಸ್ ಆಗಲಿದೆಯಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net