

ನವದೆಹಲಿ: ಹದಿನೈದು ವರ್ಷ ಭಾರತೀಯ ಕ್ರಿಕೆಟ್ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿಯವರ ಕ್ರಿಕೆಟ್ ಯುಗಾಂತ್ಯವಾಗಿದೆ. ನಿನ್ನೆ ಸ್ವಾತಂತ್ರ್ಯೋತ್ಸವದ ಸಂಭ್ರಮದ ನಡುವೆಯೇ ವಿದಾಯ ಘೋಷಿಸಿ ಅಭಿಮಾನಿಗಳಿಗೆ ಶಾಕ್ ನೀಡಿದರು. ಆದರೂ, ನೆಚ್ಚಿನ ಆಟಗಾರನನ್ನು ಸ್ಮರಿಸಿದ ಅಭಿಮಾನಿಗಳು ಭವಿಷ್ಯದ ಬಗ್ಗೆ ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಧೋನಿಯವರು ಟೀಮ್ ಇಂಡಿಯಾ ಕ್ಯಾಪ್ಟನ್ ಆಗಿದ್ದ ವೇಳೆ ತೆಗೆದುಕೊಂಡ 5 ದೃಢ ನಿರ್ಧಾರಗಳ ಬಗ್ಗೆ ಸ್ಮರಿಸಬೇಕಿದೆ.
ಐಸಿಸಿಯ ಎಲ್ಲ ಟ್ರೋಫಿಗಳನ್ನು (ಟಿ20 ವಿಶ್ವಕಪ್, ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಟೆಸ್ಟ್ ಚಾಂಪಿಯನ್ಷಿಪ್ ಗದೆ) ಜಯಿಸಿದ ವಿಶ್ವದ ಏಕೈಕ ನಾಯಕನೆಂಬ ಕೀರ್ತಿ ಗಳಿಸಿದ್ದಾರೆ. ಎಂ.ಎಸ್. ಧೋನಿ ಅವರು ತಮ್ಮ ನಾಯಕತ್ವದಲ್ಲಿ ತೆಗೆದುಕೊಂಡಂತಹ ಐದು ಪ್ರಮುಖ ನಿರ್ಧಾರಗಳು ಎಲ್ಲರನ್ನು ಚಕಿತಗೊಳಿಸಿದರೂ ಸಹ ಅದರಿಂದ ಪಂದ್ಯವನ್ನು ಗೆದ್ದಿದ್ದು ಅಚ್ಚರಿಯೇ ಸರಿ. ಈ ಕಾರಣದಿಂದಲೇ ಧೋನಿ ನಾಯಕತ್ಮ ಎಂದಿಗೂ ಹಸಿರಾಗಿರುತ್ತದೆ. ಹಾಗಾದರೆ ಧೋನಿ ತೆಗೆದುಕೊಂಡು ನಿರ್ಧಾರಗಳು ಯಾವುವು ಎಂದು ನೋಡುವುದಾದರೆ...
1. ಜೋಗಿಂದರ್ ಶರ್ಮಾರಿಗೆ ಕೊನೆಯ ಓವರ್ ನೀಡಿದ್ದು
ಹೌದು, 2007ರಲ್ಲಿ ನಡೆದ ಐಸಿಸಿ ಟಿ20 ಫೈನಲ್ ಪಂದ್ಯದಲ್ಲಿ ಧೋನಿ ನಿರ್ಧಾರ ಎಲ್ಲರನ್ನು ದಿಗ್ಭ್ರಾಂತಗೊಳಿಸಿತು. ಪಂದ್ಯದ ಕೊನೆಯ ಓವರ್ ಅನ್ನು ಅನುಭವಿ ಹರ್ಭಜನ್ಗೆ ನೀಡದೇ ಆಗಷ್ಟೇ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಜೋಗಿಂದರ್ ಶರ್ಮಾರಿಗೆ ಧೋನಿ ನೀಡಿದ್ದರು. ಪಂದ್ಯ ಗೆಲ್ಲಲು ಪಾಕಿಸ್ತಾನಕ್ಕೆ ಒಂದು ಓವರ್ನಲ್ಲಿ 13 ರನ್ ಬೇಕಿತ್ತು. ಪಾಕ್ನ ಮಿಸ್ಬಾ ಉಲ್ ಹಕ್ ಕ್ರೀಸ್ನಲ್ಲಿದ್ದರು. ಹರ್ಭಜನ್ ಎಸೆದ 17ನೇ0 ಓವರ್ನಲ್ಲಿ ಮಿಸ್ಬಾ 3 ಸಿಕ್ಸರ್ ಬಾರಿಸಿದ್ದರಿಂದ ನಿರ್ಧಾರ ಬದಲಿಸಿದ ಧೋನಿ ಜೋಗಿಂದರ್ಗೆ ಓವರ್ ಮಾಡಲು ಹೇಳಿದರು. ಓವರ್ನ ಮೊದಲನೇ ಎಸೆತವನ್ನು ವೈಡ್ ಮಾಡುವ ಮೂಲಕ ಜೋಗಿಂದರ್ ಶಾಕ್ ನೀಡಿದಾದರೂ ನಂತರ ಬಾಲ್ ಅನ್ನು ಡಾಟ್ ಮಾಡಿಸಿದರು. ಎರಡನೇ ಎಸತವನ್ನು ಮಿಸ್ಬಾ ಸಿಕ್ಸರ್ ಬಾರಿಸಿದ್ದು ಮತ್ತೆ ಭಾರತೀಯರಿಗೆ ಆಘಾತವಾಯಿತು. ಇದಾದ ಬೆನ್ನಲ್ಲೇ ಮಿಸ್ಬಾ ಬಲವಾದ ಹೊಡೆತಕ್ಕೆ ಕೈಹಾಕಿ ಶ್ರೀಶಾಂತ್ ಕೈಗೆ ಕ್ಯಾಚಿತ್ತು ನಿರ್ಗಮಿಸಿದರು. ಅಲ್ಲಿಗೆ ಇಂಡಿಯಾ ಪಾಳೆಯದಲ್ಲಿ ಹರ್ಷ ಮುಗಿಲು ಮುಟ್ಟಿತು. ಅಂದಹಾಗೆ ಟಿ20 ವಿಶ್ವಕಪ್ ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನಲ್ಲಿ ನಡೆದಿತ್ತು.
2. ಏಕದಿನ ಪಂದ್ಯಗಳಿಂದ ಸೌರವ್ ಗಂಗೂಲಿ ಹಾಗೂ ರಾಹುಲ್ ಡ್ರಾವಿಡ್ ಕೈಬಿಟ್ಟಿದ್ದು
2008ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ತ್ರಿಕೋನ ಏಕದಿನ ಸರಣಿ (ಭಾರತ, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ)ಗೆ ಗಂಗೂಲಿ ಹಾಗೂ ಡ್ರಾವಿಡ್ಗೆ ಕೋಕ್ ಕೊಡುವ ನಿರ್ಧಾರವನ್ನು ಧೋನಿ ಆಯ್ಕೆಗಾರರ ಮುಂದಿಟ್ಟಿದ್ದರು. ಕೊನೆಗೆ ಧೋನಿ ಹೇಳಿದ ಮಾತೇ ನಡೆಯಿತು. ಈ ಬಗ್ಗೆ ಅಂದಿನ ಬಿಸಿಸಿಐ ಕಾರ್ಯಾದರ್ಶಿಯನ್ನು ಪ್ರಶ್ನಿಸಿದಾಗ ಫೀಲ್ಡಿಂಗ್ ಸಾಮರ್ಥ್ಯದ ಬಗ್ಗೆ ಉಲ್ಲೇಖಿಸಿ, ಮುಖ್ಯ ಆಯ್ಕೆಗಾರರು ಮತ್ತು ತಂಡದ ಮ್ಯಾನೇಜ್ಮೆಂಟ್ ಯುವ ಆಟಗಾರರಿಗೆ ಮಣೆ ಹಾಕಿದೆ ಎಂದಿದ್ದರು. ಬ್ಯಾಟಿಂಗ್ ಮತ್ತು ಬೌಲಿಂಗ್ನಷ್ಟೇ ಫೀಲ್ಡಿಂಗ್ನಲ್ಲೂ ಭಾರತ ಗಟ್ಟಿಯಾಗಿದ್ದರೆ ಯಶಸ್ಸು ಸಾಧ್ಯ ಎಂಬುದು ಧೋನಿಯ ನಿಲುವಾಗಿತ್ತು. ಅದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾದಲ್ಲಿ ಮೊದಲ ತ್ರಿಕೋನ ಸರಣಿಯನ್ನು ಭಾರತ ಗೆದ್ದುಕೊಂಡಿತು.
3. 5ನೇ ಬ್ಯಾಟಿಂಗ್ ಕ್ರಮಾಂಕ ಆಯ್ದುಕೊಂಡಿದ್ದು
2011ರ ವಿಶ್ವಕಪ್ ಎಂದಿಗೂ ಮರೆಯಲಾಗದು. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಂಕಾ 275 ರನ್ ಟಾರ್ಗೇಟ್ ನೀಡಿತ್ತು. ಇದರ ಗುರಿ ಬೆನ್ನತ್ತಿದ ಭಾರತ ಆರಂಭದಲ್ಲೇ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್ ಮತ್ತು ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಪಂದ್ಯದ ಗೆಲ್ಲಲು ಇನ್ನು 161 ರನ್ ಬಾಕಿ ಇತ್ತು. ಅಲ್ಲದೇ ಲಸಿತ್ ಮಾಲಿಂಗ್ ಬೌಲಿಂಗ್ ಒಳ್ಳೆಯ ಲಯದಲ್ಲಿದ್ದರು. ಇಂತಹ ಸಂದಿಗ್ಧ ಸಮಯದಲ್ಲಿ ಧೋನಿ ತೆಗೆದುಕೊಂಡು ನಿರ್ಧಾರ ಕೊನೆಗೂ ಕೈಹಿಡಿದೇ ಬಿಟ್ಟಿತ್ತು. ಐದನೇ ಕ್ರಮಾಂಕದಲ್ಲಿ ಯುವಿ ಬದಲಾಗಿ ತಾವೇ ಕಣಕ್ಕಿಳಿದರು. ಕೊನೆಯವರೆಗೂ ವಿಕೆಟ್ ನೀಡದೇ ಸಿಕ್ಸರ್ನಲ್ಲಿ ತಂಡಕ್ಕೆ ಧೋನಿ ಜಯ ತಂದುಕೊಟ್ಟಿದ್ದರು. ಭಾರತದ ಪಾಲಿಗೆ ಅಂದು ಎರಡನೇ ವಿಶ್ವಕಪ್ ಕಿರೀಟ ದೊರೆಯಿತು.
4. ಸಚಿನ್, ಸೆಹ್ವಾಗ್, ಗಭೀರ ರೊಟೇಶನ್
ಯಾರು ಏನೇ ಅಂದರೂ ಸರಿ ತಂಡದ ಗೆಲುವೇ ಮುಖ್ಯ ಎನ್ನುವ ನಿರ್ಧಾರಕ್ಕೆ ಬಂದಿದ್ದ ಧೋನಿ 2008ರಲ್ಲಿ ತೆಗೆದುಕೊಂಡ ನಿರ್ಧಾರವನ್ನು ಮತ್ತೊಮ್ಮೆ ಅನುಸರಿಸಲು ಮುಂದಾದರು. ಅಂದರೆ, 2012ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಸಚಿನ್, ಸೆಹ್ವಾಗ್ ಹಾಗೂ ಗಭೀರ ಅವರನ್ನು ರೊಟೇಶನ್ ಆಧಾರದ ಮೇಲೆ ಆಡಿಸಿದರು. ಫೀಲ್ಡಿಂಗ್ನಲ್ಲಿ ಅಶಕ್ತರಾಗಿದ್ದ ಕಾರಣ ಮೂವರನ್ನು ರೊಟೇಶನ್ ಆಧಾರದ ಮೇಲೆ ಆಡಿಸಿದರು. ಆದರೆ, ಆರಂಭಿಕರಾಗಿದ್ದ ಮೂವರ ಕಳಪೆ ಸಾಧನೆಯಿಂದ ತಂಡ ಫೈನಲ್ ಪ್ರವೇಶಿಸುವಲ್ಲಿ ವಿಫಲವಾದರೂ ಆರಂಭಿಕ ಬದಲಾವಣೆಗೆ ಧೋನಿ ಮನಸ್ಸು ಮಾಡಿದರು.
5. ಆರಂಭಿಕರಾಗಿ ರೋಹಿತ್ ಹೊಸ ಆಯ್ಕೆ
ಆರಂಭಿಕ ಆಟಗಾರರ ಸಾಕಷ್ಟು ವಿಫಲತೆಯನ್ನು ಕಂಡ ಧೋನಿ ಆ ಸ್ಥಾನಕ್ಕೆ ಮತ್ತೊಬ್ಬರನ್ನು ತಯಾರಿ ಮಾಡುವ ನಿರ್ಧಾರಕ್ಕೆ ಬಂದರು. ಆಗ ಧೋನಿಗೆ ತಲೆಗೆ ಬಂದಿದ್ದೆ ರೋಹಿತ್ ಹೆಸರು. ಆರಂಭದಲ್ಲಿ ರೋಹಿತ್ ವಿಫಲರಾದರು. 2011ರಲ್ಲಿ ರೋಹಿತ್ ಮೊದಲ ಬಾರಿಗೆ ಆರಂಭಿಕರಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿದರು. ಆದರೆ ಮೂರು ಪಂದ್ಯಗಳಲ್ಲಿ ಕೇವಲ 29ರನ್ ಗಳಿಸಿದರು. ಆದರೂ ಸಹ ನಂತರ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಆರಂಭಿಕನ ಸ್ಥಾನವನ್ನು ಅಲಂಕರಿಸಿದರು. (ಏಜೆನ್ಸೀಸ್)