

ಟೊಕಿಯೋ: ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಫಾಲೋವರ್ಸ್ ಪಡೆಯಲು ಸಾಕಷ್ಟು ಸರ್ಕಸ್ ಮಾಡುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಎಲ್ಲರಿಗೂ ಒಂದು ಹೆಜ್ಜೆ ಮುಂದೆ ಹೋಗಿ ಯಾರು ಊಹಿಸಿರದ ರೀತಿಯಲ್ಲಿ ಎಲ್ಲರನ್ನು ಬಕ್ರ ಮಾಡಿದ್ದಾರೆ. ಅಚ್ಚರಿಯೆಂದರೆ ಫಾಲೋವರ್ಸ್ ಸಂಖ್ಯೆಯು ಹೆಚ್ಚಾಗಿದೆ.
ಹೌದು. ಜಪಾನಿನ ಬೈಕರ್ ಯುವತಿಯೊಬ್ಬಳು ಇತ್ತೀಚೆಗಷ್ಟೇ ತಾನು ಹೆಣ್ಣಲ್ಲ ಗಂಡು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅದರಲ್ಲೂ ಚಿರ ಯೌವ್ವನೆಯಂತೆ ಕಾಣುತ್ತಿದ್ದ ಬೈಕರ್ ಯುವತಿ 50 ವರ್ಷದ ಪುರುಷ ಎಂಬುದು ಇದೀಗ ಎಲ್ಲರ ಹುಬ್ಬೇರಿಸಿದೆ. ಜಾಲತಾಣದಲ್ಲಿ ಫಾಲೋವರ್ಸ್ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಯುವತಿಯಾಗಿ ಮುಖ ವಿನ್ಯಾಸ ಮಾಡಿಸಿಕೊಂಡಿದ್ದಾರೆ.
@azusagakuyuki ಹೆಸರಿನ ಟ್ವಿಟರ್ ಖಾತೆಯನ್ನು ಹೊಂದಿರುವ ವ್ಯಕ್ತಿಯನ್ನು ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ಅನುಸರಿಸುತ್ತಿದ್ದಾರೆ. ಅವರ ಪ್ರೊಫೈಲ್ ಸೇರಿದಂತೆ ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿರುವ ಎಲ್ಲ ಫೋಟೋಗಳಲ್ಲಿಯು ಯುವತಿ ವೇಷದಲ್ಲಿದ್ದಾರೆ. ಆದರೆ, ಒಂದು ಚಿತ್ರದಲ್ಲಿ ನೆಟ್ಟಿಗರು ವ್ಯಕ್ತಿಯ ಪ್ರತಿಬಿಂಬವನ್ನು ನೋಡಿದ ಬಳಿಕ ನಿಜ ಸಂಗತಿ ಬಯಲಾಗಿದೆ.
ಬೈಕ್ ಮುಂದೆ ನಿಂತು ಪೋಸ್ ನೀಡಿರುವ ಫೋಟೋವನ್ನು ದಿನನಿತ್ಯ ಬೈಕರ್ ಪೋಸ್ಟ್ ಮಾಡುತ್ತಿದ್ದರು. ಆದರೆ, ದೀರ್ಘ ಸಮಯದವರೆಗೂ ಯಾರು ಸಹ ನಿಜ ಸಂಗತಿಯನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಆದರೆ, ಫೆಬ್ರವರಿ 11ರಂದು ಪೋಸ್ಟ್ ಮಾಡಿದ ಫೋಟೋದಲ್ಲಿರುವ ಬೈಕ್ ಮಿರರ್ನಲ್ಲಿರುವುದು ಅವಳ ಚಿತ್ರ ಎಂದು ಭಾವಿಸಲಾಗಿತ್ತು. ಆದರೆ, ನೆಟಿಜನ್‌ಗಳು ಮಧ್ಯವಯಸ್ಕ ವ್ಯಕ್ತಿಯ ಪ್ರತಿಬಿಂಬವನ್ನು ನೋಡಿ ದಂಗಾಗಿದ್ದರು.
ಇದು ಜಾಲತಾಣದಲ್ಲಿ ಹೆಚ್ಚು ಗಮನ ಸೆಳೆದ ಬಳಿಕ ಆ ವ್ಯಕ್ತಿಯನ್ನು ಜಪಾನ್ನ ಟಿವಿ ಮಾಧ್ಯಮವೊಂದು ಪತ್ತೆ ಹಚ್ಚಿದೆ. ಈ ವೇಳೆಯೇ ಎಲ್ಲರಿಗೂ ಗೊತ್ತಾಗಿದ್ದು, ಇಸುವರೆಗೂ ಯುವತಿ ವೇಷದಲ್ಲಿ ಇದ್ದಿದ್ದು, ಭುಜದವರೆಗೆ ಕೂದಲು ಬಿಟ್ಟುಕೊಂಡಿರುವ ಮಧ್ಯ ವಯಸ್ಕ ಎಂಬುದು.
ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಮುಖವನ್ನು ಯುವತಿಯಂತೆ ವಿನ್ಯಾಸ ಮಾಡಿಕೊಂಡು ಈವರೆಗೆ ಅನೇಕರನ್ನು ವಂಚಿಸುತ್ತಿದ್ದುದ್ದು ಕೊನೆಗೂ ಬೆಳಕಿಗೆ ಬಂದಿದೆ. ತನ್ನ ಮುಖವನ್ನು ಫೇಸ್ಆ್ಯಪ್ ಮತ್ತು ಫೋಟೋಶಾಪ್ ಮೂಲಕ ಬದಲಾಯಿಸುತ್ತಿದ್ದ ಎಂಬುದು ತಿಳಿದುಬಂದಿದೆ. (ಏಜೆನ್ಸೀಸ್)