ಮದುವೆಯಾದ ಒಂದೇ ವರ್ಷಕ್ಕೆ ಖ್ಯಾತ ನಟಿಯ ಬಾಳಲ್ಲಿ ವಿಧಿಯ ಕ್ರೂರ ಆಟ

Arvind Shekar
Published on

ಚೆನ್ನೈ: ತಮಿಳು ಕಿರುತೆರೆಯ ಖ್ಯಾತ ನಟಿ ಶ್ರುತಿ ಷಣ್ಮುಗ ಪ್ರಿಯಾ ಅವರ ಪತಿ ಅರವಿಂದ್​ ಶೇಖರ್​ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಕಳೆದ ವರ್ಷದ ಮೇ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಈ ಜೋಡಿ ಕಾಲಿಟ್ಟಿತ್ತು.

ಆಗಸ್ಟ್​ 2ರಂದು ಸಂಜೆ ಅರವಿಂದ್​ ಎದೆಯಲ್ಲಿ ನೋವು ಕಾಣಿಸಿಕೊಂಡ ಕಾರಣ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ಧಾರೆ.

Serial Actress

ಶ್ರುತಿ ಮತ್ತು ಅರವಿಂದ್​ ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದರು. ಬಾಡಿ ಬಿಲ್ಡಿರ್​ ಹಾಗೂ ಡಯಟೀಶಿಯನ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅರವಿಂದ್ ತೂಕ ಇಳಿಸುವ ಬಗ್ಗೆ​ ಆನ್​ಲೈನ್​ ಕ್ಲಾಸ್​ಗಳನ್ನು ತೆಗೆದುಕೊಳ್ಳುತ್ತಿದ್ದರು. ಅರವಿಂದ್​ ಹಾಗೂ ಶ್ರುತಿ ಜೋಡಿ ಕೊನೆಯದಾಗಿ ಮಾಡಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.

ಮೂಲತಃ ರಂಗಭೂಮಿ ಕಲಾವಿದೆಯಾಗಿರುವ ಶೃತಿ ಷಣ್ಮುಗ ಪ್ರಿಯಾ ನಾಥಸ್ವರಂ ಧಾರಾವಾಹಿ ಮೂಲಕ ಮನೆ ಮಾತಾಗಿದ್ದರು. ವಾಣಿ ರಾಣಿ, ಕಲ್ಯಾಣ ಪರಿಸು, ಪೊನ್ನುಂಚಲ್​, ಭಾರತಿ ಕಣ್ಣಮ್ಮ ಸೇರಿದಂತೆ ಹಲವು ಹಿಟ್​ ಧಾರಾವಾಹಿಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net