ಇಬ್ಬರೂ ಮಕ್ಕಳಿಗೆ ಸಂಪೂರ್ಣ ಅಂಗವೈಕಲ್ಯ; ನೆರವಿನ ನಿರೀಕ್ಷೆಯಲ್ಲಿದೆ ಸಂಕಷ್ಟದಲ್ಲಿರುವ ಬಡಕುಟುಂಬ

17sdp2
Published on

ಸಿದ್ದಾಪುರ: ಕೂಲಿ ಮಾಡಿ ಬದುಕು ಸಾಗಿಸುವ ಸ್ಥಿತಿ. ಕುಟಂಬಕ್ಕೆ ಆಧಾರ ಸ್ತಂಭವಾಗಬೇಕಿದ್ದ ಮಕ್ಕಳಿಗೆ ಅಂಗವೈಕಲ್ಯ. ಮಾನಸಿಕ ವ್ಯಥೆ ಮತ್ತು ಕಣ್ಣೀರಿನಲ್ಲೇ ದಿನ ದೂಡಬೇಕಾದ ಅನಿವಾರ್ಯತೆ.

ಹೌದು, ತಾಲೂಕಿನ ಮಾದ್ಲಮನೆಯ ಜನಾರ್ದನ ಕೃಷ್ಣ ಗೌಡ ಹಾಗೂ ಪಾರ್ವತಿ ದಂಪತಿಯ ನಿರಂಜನ (7) ಹಾಗೂ ಪೂರ್ವಿ (3) ಎಂಬ ಮಕ್ಕಳು ಹುಟ್ಟುತ್ತಲೇ ಅಂಗವಿಕಲರಾಗಿದ್ದಾರೆ. ಇಡೀ ದೇಹದ ನರ ಮಂಡಲ ದೌರ್ಬಲ್ಯದಿಂದ ಕೂಡಿದ್ದು ಸಂಪೂರ್ಣ ಅಂಗವೈಕಲ್ಯವಿದೆ ಎಂದು ಬಡ ದಂಪತಿ ನೋವಿನಿಂದ ಮರುಗುತ್ತಿದ್ದಾರೆ.

‘ನಮಗೆ ಇಬ್ಬರು ಮಕ್ಕಳಿದ್ದರೂ ಮಾನಸಿಕ ವಾಗಿ ನೆಮ್ಮದಿ ಇಲ್ಲ. ಇಬ್ಬರೂ ನಿಶ್ಯಕ್ತರಾಗಿದ್ದು, ಅವರ ದಿನ ನಿತ್ಯದ ಎಲ್ಲ ಕೆಲಸಗಳನ್ನು ನಾವೇ ಮಾಡಿಸಬೇಕು. ನಡೆದಾಡಲು, ಮಾತನಾಡಲು, ತಮಗೆ ಏನು ಬೇಕೆಂದು ಹೇಳಲು ಆಗದ ಸ್ಥಿತಿಯಲ್ಲಿದ್ದಾರೆ. ಮಣಿಪಾಲ, ಮಂಗಳೂರು, ಕುಂದಾಪುರ, ಶಿರಸಿ ಮತ್ತಿತರ ಆಸ್ಪತ್ರೆಗಳಿಗೆ ಕರೆದುಕೊಂಡಿ ಹೋಗಿ ಚಿಕಿತ್ಸೆ ಕೊಡಿಸಿದರೂ ಏನೂ ಪ್ರಯೋಜನವಾಗಿಲ್ಲ. ಚಿಕಿತ್ಸೆ ನೀಡಿದ ವೈದ್ಯರೆಲ್ಲ ಗುಣಮುಖರಾಗುತ್ತಾರೆ, ನರ ದೌರ್ಬಲ್ಯ ಇರುವುದರಿಂದ ಈ ರೀತಿ ಆಗಿದ್ದಾರೆ ಎಂದು ಹೇಳಿದ್ದಾರೆ. ಆದರೂ ಏನೂ ಸುಧಾರಣೆ ಕಂಡುಬಂದಿಲ್ಲ. ಹಿರಿಯರು ಹೇಳಿದಂತೆ ಕೆಲವು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದೇವೆ’ ಎಂದು ಹೆತ್ತವರು ಕಂಬನಿ ಇಡುತ್ತ ಮಕ್ಕಳ ಸ್ಥಿತಿಯನ್ನು ವಿವರಿಸುತ್ತಾರೆ.

ಕೂಲಿ ಜೀವನ: ನಿತ್ಯ ಕೂಲಿ ಮಾಡಿದರೆ ಮಾತ್ರ ಜನಾರ್ದನ ಗೌಡ ಅವರ ಬದುಕಿನ ಬಂಡಿ ಸಾಗುತ್ತದೆ. ಇಲ್ಲದಿದ್ದರೆ ನಿತ್ಯದ ಊಟಕ್ಕೂ ತೊಂದರೆ ಅನುಭವಿಸುವ ಸ್ಥಿತಿ. ಮಕ್ಕಳ ಔಷಧಕ್ಕಾಗಿ ಪ್ರತಿ ತಿಂಗಳು 800 ರೂ. ಬೇಕಾಗುತ್ತದೆ. ಒಂದೆಡೆ ಮಕ್ಕಳನ್ನು ನೋಡಿಕೊಳ್ಳಬೇಕು, ಮತ್ತೊಂದೆಡೆ ಕುಟುಂಬ ನಿರ್ವಹಣೆ ಮಾಡುವ ಜವಾಬ್ದಾರಿ. ಕಷ್ಟದಲ್ಲೂ ಜನಾರ್ದನ ಗೌಡ ದಂಪತಿ ಮಕ್ಕಳನ್ನು ಪೋಷಿಸುತ್ತ ಬಂದಿದ್ದಾರೆ. ಆದರೆ, ಈ ದಂಪತಿಗೆ ಆರ್ಥಿಕ ಸಹಾಯ ಅವಶ್ಯವಾಗಿದೆ.

ಕಷ್ಟದಲ್ಲಿರುವ ಈ ದಂಪತಿಗೆ ಆರ್ಥಿಕ ಸಹಾಯ ಮಾಡಲಿಚ್ಛಿಸುವವರು ಎಸ್​ಬಿಐ ಸಿದ್ದಾಪುರ, ಐಎಫ್​ಎಸ್​ಸಿ ಕೋಡ್ ನಂ. ಎಸ್​ಬಿಐಎನ್0040131, ಖಾತೆ ನಂ: 64211090874ಗೆ ಹಣ ಹಾಕಬಹುದು.

ಎಂಡೋಸಲ್ಪಾನ್ ಶಂಕೆ?: ಹೊನ್ನಾವರ ತಾಲೂಕಿನ ಹಲವು ಭಾಗದಲ್ಲಿ ಗೇರು ತೋಟಗಳಿಗೆ ಎಂಡೋಸಲ್ಪಾನ್ ಕೀಟನಾಶಕ ಸಿಂಪಡಿಸಿದ್ದರು. ಇದರ ದುಷ್ಪರಿಣಾಮವು ಎರಡರಿಂದ ಮೂರು ತಲೆಮಾರಿನವರೆಗೂ ಉಂಟಾಗಿರುವುದು ಈಗಾಗಲೆ ಸಾಬೀತಾಗಿದೆ. ಪಾರ್ವತಿ ಗೌಡ ಅವರ ತವರುಮನೆ ಹೊನ್ನಾವರ ತಾಲೂಕಿನ ಅಪ್ಸರಕೊಂಡ. ಈ ಭಾಗದಲ್ಲೂ ಎಂಡೋಸಲ್ಪಾನ್ ಬಾಧಿತರು ಇದ್ದಾರೆ. ಅಲ್ಲದೆ, ಪಾರ್ವತಿ ಅವರ ಮೇಲೆ ಎಂಡೋಸಲ್ಪಾನ್ ಪರಿಣಾಮ ಬೀರದಿದ್ದರೂ ಅವರ ಮಕ್ಕಳ ಮೇಲೆ ಬೀಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಮಕ್ಕಳಿಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಈಗ ಹೇಗೂ ನಡೆಯುತ್ತದೆ. ಮುಂದೆ ದೊಡ್ಡವರಾದ ಮೇಲೆ ಅವರ ಜೀವನ ಹೇಗೆ ಎಂಬ ಚಿಂತೆ ಕಾಡುತ್ತಿದೆ. ಮಕ್ಕಳ ಮುಂದಿನ ಜೀವನಕ್ಕೆ ಸರ್ಕಾರ ಹಾಗೂ ಜನತೆ ಆರ್ಥಿಕ ಸಹಾಯ ಮಾಡಬೇಕು. | ಪಾರ್ವತಿ ಜನಾರ್ದನ ಗೌಡ ತಾಯಿ

ಆರೋಗ್ಯ ತಂಡ ಕಳಿಸಿ ಮಕ್ಕಳ ಆರೋಗ್ಯದ ಬಗ್ಗೆ ಸಂಪೂರ್ಣ ವಿವರ ಪಡೆದು ಪರಿಶೀಲಿಸಿ, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಕಳುಹಿಸಲಾಗುವುದು. ಎಂಡೋಸಲ್ಪಾನ್ ಇದ್ದರೆ ಆ ಕುರಿತು ಸರ್ಕಾರದ ಗಮನಕ್ಕೂ ತರಲಾಗುವುದು. | ಡಾ. ಲಕ್ಷ್ಮೀಕಾಂತ ನಾಯ್ಕ ತಾಲೂಕು ಆರೋಗ್ಯಾಧಿಕಾರಿ, ಸಿದ್ದಾಪುರ

ರಮೇಶ ಹಾರ್ಸಿಮನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net