ನ್ಯಾ. ಸಂತೋಷ್ ಹೆಗ್ಡೆ ಹೆಸರಲ್ಲಿ ನಕಲಿ ಸ್ಟೇಟ್​ಮೆಂಟ್ ಸೃಷ್ಟಿಸಿದ ಕಿಡಿಗೇಡಿಗಳು!

santhosh
Published on

ಬೆಂಗಳೂರು: ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರ ಹೆಸರಿನಲ್ಲಿ ಕೆಲ ಕಿಡಿಗೇಡಿಗಳು ಹೇಳಿಕೆಗಳನ್ನು ಹರಿಯಬಿಡುತ್ತಿದ್ದಾರೆ.

'ಐ ಆ್ಯಮ್ ಕಾಂಗ್ರೆಸ್' ಎಂಬ ಲೋಗೋ, ನ್ಯಾ. ಸಂತೋಷ್​ ಹೆಗ್ಡೆ ಅವರ ಫೋಟೋ ಬಳಸಿ ಬಿಜೆಪಿ ಸರ್ಕಾರದ ವಿರುದ್ಧ ಅವಹೇಳನಾಕಾರಿ ಹೇಳಿಕೆ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ದುಷ್ಕರ್ಮಿಗಳು ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಗರಂ ಆಗಿರುವ ನ್ಯಾ. ಸಂತೋಷ್​ ಹೆಗ್ಡೆ, 'ನನ್ನದಲ್ಲದ ಹೇಳಿಕೆ ಅಥವಾ ನನ್ನ ಹೇಳಿಕೆಯನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ನನ್ಮ ಹೆಸರು ದುರ್ಬಳಕೆ ಮಾಡಿಕೊಂಡಲ್ಲಿ ಸಹಿಸುವುದಿಲ್ಲ' ಎಂದು ಎಚ್ಚರಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ನ್ಯಾ. ಸಂತೋಷ್ ಹೆಗ್ಡೆ, 'ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ತಮಗೆ ಬೇಕಾದ ರೀತಿಯಲ್ಲಿ ಹೇಳಿಕೆಗಳನ್ನು ಸೃಷ್ಟಿಸಿ ಇದು ಸಂತೋಷ್ ಹೆಗ್ಡೆ ಅವರ ಸ್ಟೇಟ್​ಮೆಂಟ್ ಎಂಬಂತೆ ಅನೇಕ ಬಾರಿ ಬಿಂಬಿಸುವ ಪ್ರಯತ್ನ ನಡೆದಿದೆ. ಇದು ಸರಿಯಲ್ಲ. ವ್ಯವಸ್ಥೆ ವಿರುದ್ಧ ನಾನು ಸಾಕಷ್ಟು ಬಾರಿ ಧ್ವನಿ ಎತ್ತಿದ್ದೇನೆ, ಮುಂದೆಯೂ ಅಗತ್ಯ ಸಂದರ್ಭಗಳಲ್ಲಿ ಇದು ಇದ್ದೇ ಇರುತ್ತದೆ. ಆದರೆ, ನನ್ನದಲ್ಲದ ಹೇಳಿಕೆ ಇಲ್ಲವೇ ಅವರಿಗೆ ಬೇಕಾದ ರೀತಿಯಲ್ಲಿ ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ನನ್ಮ ಹೆಸರು ದುರ್ಬಳಕೆ ಮಾಡಿಕೊಂಡಲ್ಲಿ ಸಹಿಸುವುದಿಲ್ಲ' ಎಂದು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net