

ಬೆಂಗಳೂರು: ಒಂದೂವರೆ ತಿಂಗಳ ಹಿಂದೆ ರಸ್ತೆಯಲ್ಲಿ ಕಾರು ಅಡ್ಡಗಟ್ಟಿ 45.5 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದ ದುಷ್ಕರ್ಮಿಗಳು ಆ ಹಣವನ್ನು ಟೈರ್ನಲ್ಲಿ ಬಚ್ಚಿಟ್ಟು ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಜೂ.11ರ ಸಂಜೆ ಐಟಿಸಿ ಕಂಪನಿಯ ಡಿಸ್ಟ್ರಿಬ್ಯೂಟರ್ ರಾಕೇಶ್ ಪೋಕರ್ಣ ಅವರು ಕಲೆಕ್ಸನ್ ಹಣವನ್ನು ಇಟ್ಟುಕೊಂಡು ಕಾರಿನಲ್ಲಿ ಹೋಗುತ್ತಿದ್ದರು. ಈ ಕಂಪನಿಯ ಮಾಜಿ ಉದ್ಯೋಗಿ ಮಹಮ್ಮದ್ ಇಷಾಕ್ ರಾಕೇಶ್ ಪೋಕರ್ಣ ಬಳಿಯ ಹಣ ದೋಚಲು ಸ್ಕೆಚ್ ಹಾಕಿದ್ದ. ಅದರಂತೆ ಅಂದು ಸಂಜೆ ಮಹಮದ್ ಇಶಾಕ್ ನೇತೃತ್ವದ ಗುಂಪೊಂದು ಸಿಚಡ್ಸ್ ಟೌನ್ನ ಪಾಟರಿ ರಸ್ತೆಯಲ್ಲಿ ರಾಕೇಶ್ರ ಕಾರನ್ನು ಅಡ್ಡಗಟ್ಟಿ ಚಾಕು ತೋರಿಸಿ ಕಾರಿನಲ್ಲಿದ್ದ ನಲವತ್ತೈದು ಲಕ್ಷ ರೂಪಾಯಿಯನ್ನು ದೋಚಿತ್ತು.
ಸಿಗರೇಟ್ ವಿತರಕನ ಸುಲಿಗೆ ಪ್ರಕರಣ ಪುಲಿಕೇಶಿ ನಗರ ಠಾಣೆಯಲ್ಲಿ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಉಪ ಪೊಲೀಸ್ ಆಯುಕ್ತ ಡಾ. ಎಸ್.ಡಿ.ಶರಣಪ್ಪ ಮಾರ್ಗದರ್ಶನದಲ್ಲಿ
ಪುಲಕೇಶಿನಗರ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತೆ ತಬರಾಕ್ ಫಾತೀಮಾ ನೇತೃತ್ವದ ತಂಡ ಬಲೆ ಬೀಸಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರು ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಗಳಾದ ಮಹಮದ್ ಇಶಾಕ್, ಮಹಮದ್ ಫರ್ವೇಜ್, ಮಹಮದ್ ಅದ್ನಾನ್, ಅಫ್ನಾನ್ ಪಾಷಾ ಬಂಧಿತರು. ಮಹಮದ್ ಇಶಾಕ್ ಐಟಿಸಿ ಕಂಪನಿಯ ಹಳೇ ಉದ್ಯೋಗಿಯಾಗಿದ್ದ. ಡಿಸ್ಟ್ರಿಬ್ಯೂಟರ್ನ ಚಲನವಲನಗಳ ಬಗ್ಗೆ ಅಬ್ಸರ್ವ್ ಮಾಡಿದ್ದ ಇಶಾಕ್ ಹಣ ಸುಲಿಗೆಗೆ ಯೋಜನೆ ರೂಪಿಸಿದ್ದ. ಕಾರಿಗೆ ಬೈಕ್ನಲ್ಲಿ ಅಡ್ಡಗಟ್ಟಿ ದೋಚಿದ್ದ ಹಣವನ್ನು ನಾಲ್ವರೂ ಹಂಚಿಕೆ ಮಾಡಿಕೊಂಡಿದ್ದರು. ಪ್ರಮುಖ ಆರೋಪಿ ಮೊಹಮದ್ ಇಶಾಕ್ ತನ್ನ ಪಾಲಿನ ಹಣವನ್ನು ಬೇತಮಂಗಲದ ಸಹೋದರಿಯ ಮನೆಯಲ್ಲಿ ಕಾರಿನ ಟೈಯರ್ ಒಳಗೆ ಬಚ್ಚಿಟ್ಟಿದ್ದ. ಇನ್ನಿತರ ಆರೋಪಿಗಳು ಸ್ನೇಹಿತರ ಮನೆಯಲ್ಲಿ ಹಣ ಬಚ್ಚಿಟ್ಟಿದ್ದರು. ದರೋಡೆ ಮಾಡಿದ್ದ 45.5 ಲಕ್ಷ ರೂ. ಪೈಕಿ 31.86 ಲಕ್ಷ ರೂ. ನಗದು ಪೊಲೀಸರ ಕೈಗೆ ಸಿಕ್ಕಿದೆ.