'ಆನ್​ಲೈನ್​ ಮೂಲಕ ಬರೋ ಗಿಫ್ಟ್ ಸ್ವೀಕರಿಸಿ': ಜಿಲ್ಲಾಧಿಕಾರಿ ಹೆಸ್ರಲ್ಲಿ ಬಂತೊಂದು ಮೇಲ್​!

Collector-innocent-divya
Published on

ಉದಕಮಂಡಲ: ಆನ್​ಲೈನ್ ಮೂಲಕ ಬರುವ ಗಿಫ್ಟ್​ಗಳನ್ನು ನೀವು ಸ್ವೀಕರಿಸಬಹುದು ಎಂಬ ಸಂದೇಶವಿರುವ ಇಮೇಲ್ ಜಿಲ್ಲಾಧಿಕಾರಿಯ ಹೆಸರಿನಲ್ಲಿ ನೀಲಗಿರೀಸ್ ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ರವಾನೆಯಾಗಿದೆ. ಅಮೆಜಾನ್​, ಫ್ಲಿಪ್​ಕಾರ್ಟ್ ಮೂಲಕ ಗಿಫ್ಟ್​ಗಳು ಬಂದರೆ ಅವುಗಳನ್ನು ಸ್ವೀಕರಿಸಬಹುದು. ಆ ರೀತಿ ಗಿಫ್ಟ್ ಸ್ವೀಕರಿಸುವುದಕ್ಕೆ ಯಾವುದೇ ಅಡ್ಡಿ ಇಲ್ಲ. ನಿಯಮದ ಸಮಸ್ಯೆಯೂ ಇಲ್ಲ ಎಂಬ ಒಕ್ಕಣೆ ಇರುವ ಇಮೇಲ್ ಅದಾಗಿತ್ತು.

ಜಿಲ್ಲಾ ಕಲೆಕ್ಟರ್​ ಹೆಸರಿನಲ್ಲಿ ಬಂದ ಇ-ಮೇಲ್​ ನೋಡಿ ಅಧಿಕಾರಿಗಳಿಗೆಲ್ಲ ಅಚ್ಚರಿ, ಸಂದೇಹ. ಅವರಲ್ಲಿ ಕೆಲವರು ಧೈರ್ಯಮಾಡಿ ಜಿಲ್ಲಾ ಕಲೆಕ್ಟರ್​ ಇನ್ನಸೆಂಟ್​ ದಿವ್ಯಾ ಅವರನ್ನು ಸಂಪರ್ಕಿಸಿದ್ದರು. ವಿಷಯವರಿತು ಬೇಸ್ತುಬೀಳುವ ಸರದಿ ಜಿಲ್ಲಾಧಿಕಾರಿಯವರದ್ದಾಗಿತ್ತು. ತಾನು ಯಾವುದೇ ಇ-ಮೇಲ್ ಕಳುಹಿಸಿಲ್ಲ. ಅಧಿಕಾರಿಗಳು ಮತ್ತು ಸಾರ್ವಜನಿಕರು ಅಂತಹ ಇ-ಮೇಲ್​ಗಳನ್ನು ನಿರ್ಲಕ್ಷಿಸಬೇಕು ಎಂದು ಅವರು ಸ್ಪಷ್ಟಪಡಿಸಿದರು.

ನಂತರ ವಿಚಾರಣೆ ನಡೆಸಿದಾಗ, ನಕಲಿ ಇ-ಮೇಲ್​ ಬಳಸಿ ಕಿಡಿಗೇಡಿಗಳು ಈ ದುಷ್ಕೃತ್ಯವೆಸಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಮೋಹನ್​​ಗೆ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ, ತನಿಖೆಗೆ ಆದೇಶಿಸಿದ್ದಾರೆ. ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net