ಅಸ್ಸಾಂನಲ್ಲಿ ಮುನ್ನಾಬಾಯಿ MBBS​; 50ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಮಾಡಿದ್ದ ನಕಲಿ ವೈದ್ಯ ಕಡೆಗೂ ಅರೆಸ್ಟ್​​| Fake Doctor

Fake Doctor 1
Published on

Fake Doctor: ಬಾಲಿವುಡ್ ನಟ ಸಂಜಯ್ ದತ್ ಅಭಿನಯದ ಮುನ್ನಾಬಾಯಿ ಎಂಬಿಬಿಎಸ್ ಸಿನಿಮಾವನ್ನು ನೆನಪಿಸುವಂತೆ, 50ಕ್ಕೂ ಹೆಚ್ಚು ಗರ್ಭಿಣಿಯರಿಗೆ ಸಿಸೇರಿಯನ್ ಶಸ್ತ್ರ ಚಿಕಿತ್ಸೆ ಮಾಡಿದ್ದ ನಕಲಿ ವೈದ್ಯನೊಬ್ಬನನ್ನು ಅಸ್ಸಾಂನ ಸಿಲ್ಚಾರ್​ನಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಆರೋಪಿ ಪುಲೋಕ್ ಮಲಾಕರ್, ಸಿಲ್ಚಾರ್​ನ ಪ್ರಸಿದ್ದ ಸ್ತ್ರೀರೋಗ ತಜ್ಞ ಎಂದು ಗುರುತಿಸಿಕೊಂಡಿದ್ದು, 2 ಖಾಸಗಿ ಆಸ್ಪತ್ರೆಗಳಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಿದ್ದನು ಎನ್ನಲಾಗಿದೆ. ಆಪರೇಷನ್ ಥಿಯೇಟರ್​ನಲ್ಲಿ ಕೆಲಸ ಮಾಡುವಾಗಲೇ ನಕಲಿ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಿಲ್ಚಾರ್​ನ ಹಿರಿಯ ಪೊಲೀಸ್ ಅಧಿಕಾರಿ ನುಮಲ್ ಮಹಾಟ್ಟಾ, "ನಮಗೆ ಸಿಕ್ಕ ಮಾಹಿತಿ ಆಧರಿಸಿ ಅವರ ಬಗ್ಗೆ ತನಿಖೆ ಮಾಡಿದ್ದೆವು. ಎಲ್ಲಾ ದಾಖಲೆಗಳ ಪರಿಶೀಲನೆ ಬಳಿಕ ಅವರ ಎಲ್ಲಾ ದಾಖಲೆಗಳು ನಕಲಿ ಎಂದು ತಿಳಿದು ಬಂದಿದೆ. ಹಲವು ವರ್ಷಗಳಿಂದ ಈ ಕೆಲಸ ಮಾಡ್ತಿದ್ದರು ಬಂಧಿಸಿ ಕೋರ್ಟ್​​ಗೆ ಹಾಜರುಪಡಿಸಿದ್ದೇವೆ" ಎಂದು ಹೇಳಿದ್ದಾರೆ.

ಅಸ್ಸಾಂನ ಶ್ರೀಭೂಮಿ ನಿವಾಸಿಯಾಗಿರುವ ಮಲಾಕರ್​ನನ್ನು ಸೋಮವಾರ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನಂತರ ಕೋರ್ಟ್​ ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಅಸ್ಸಾಂನಲ್ಲಿ ನಕಲಿ ವೈದ್ಯರ ಕಾರ್ಯಾಚರಣೆ

ಅಸ್ಸಾಂನಲ್ಲಿ ಸಿಎಂ ಹಿಮಂತ್ ಶರ್ಮಾ ನೇತೃತ್ವದ ಸರ್ಕಾರ ಈ ವರ್ಷದ ಜನವರಿಯಲ್ಲಿ ಆ್ಯಂಟಿ ಕ್ವಾಕರಿ ವಿಜಿಲೆನ್ಸ್ ಸೆಲ್ ಸ್ಥಾಪಿಸಿ ನಕಲಿ ವೈದ್ಯರ ವಿರುದ್ಧ ಕಾರ್ಯಾಚರಣೆ ಆರಂಭಿಸಿದೆ. ಇದು ರಾಜ್ಯ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದೆ. ಈವರೆಗೆ ಈ ವಿಭಾಗ 10ಕ್ಕೂ ಹೆಚ್ಚು ನಕಲಿ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net