ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ನಿಧನ|Satya Pal Malik

Satypal Mallik
Published on

Satya Pal Malik: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್(79), ದೆಹಲಿಯ ರಾಮ್ ಮನೋಹರ್ ಆಸ್ಪತ್ರೆಯಲ್ಲಿ ಮಂಗಳವಾರ(ಆಗಸ್ಟ್ 5) ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.

ದೀರ್ಘಕಾಲದವರೆಗೆ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ಸತ್ಯಪಾಲ್ ಅವರನ್ನು ಮೇ 11ರಂದು ರಾಮಮನೋಹರ್ ಲೋಹಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು ಎನ್ನಲಾಗಿದೆ. ಮಧ್ಯಾಹ್ನ 1.12ಕ್ಕೆ ನಿಧನರಾದರು ಎಂದು ಅವರ ಸಹೋದ್ಯೋಗಿ ಕನ್ವರ್ ಸಿಂಗ್ ರಾಣಾ ತಿಳಿಸಿದ್ದಾರೆ.

ಸತ್ಯಪಾಲ್ ಮಲ್ಲಿಕ್ ಯಾರು?

ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯ ಹಿಸ್ವಾಡಾ ಗ್ರಾಮದಲ್ಲಿ 1946 ಜುಲೈ 24ರಂದು ಜಾಟ್ ಕುಟುಂಬದಲ್ಲಿ ಜನಸಿದ್ದ ಸತ್ಯಪಾಲ್ ಮಲ್ಲಿಕ್, ಮೀರತ್ ಕಾಲೇಜಿನಲ್ಲಿ ವಿಜ್ಞಾನ ಪದವಿ ಮತ್ತು ಎಲ್​ಎಲ್​ಬಿ ಪದವಿಗಳನ್ನು ಪಡೆದಿದ್ದಾರೆ.

1968-69ರಲ್ಲಿ ಮೀರತ್ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ ಅವರು,  1974-77 ರವರೆಗೆ ಉತ್ತರ ಪ್ರದೇಶ ವಿಧಾನಸಭೆಯ ಸದಸ್ಯರಾಗಿದ್ದರು. 1980 ರಿಂದ 1989 ರವರೆಗೆ ರಾಜ್ಯಸಭೆ ಸದಸ್ಯರಾಗಿದ್ದರು. 1989 ಜನತಾದಳದಿಂದ ಅಲಿಘರ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.

2018ರಿಂದ 2018ರವರೆಗೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಅವಧಿಯಲ್ಲಿಯೇ ಐತಿಹಾಸಿಕ 370ನೇ ವಿಧಿಯನ್ನು ರದ್ದುಗೊಳಿಸಲಾಯಿತು. ಜಮ್ಮು-ಕಾಶ್ಮೀರವನ್ನು 2 ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಯಿತು. ನಂತರ ಬಿಹಾರ, ಮೇಘಾಲಯ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ.

2019ರ ಪುಲ್ವಾಮಾ ದಾಳಿಯಲ್ಲಿ ಭದ್ರತಾ ವೈಫಲ್ಯಗಳ ವಿಷಯದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರು. ಅಲ್ಲಿಂದ ಕೇಂದ್ರ ಸರ್ಕಾರದ ಜೊತೆ ಸಂಪರ್ಕವನ್ನು ಕಡಿಕೊಂಡರು. ಆ ಬಳಿಕ ಅವರ ಮೇಲೆ ಕಾಶ್ಮೀರದಲ್ಲಿ ಕಿರು ಜಲವಿದ್ಯುತ್ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಇಡಿ ದಾಳಿ ಮಾಡಿ ಶೋಧ ನಡೆಸಿತ್ತು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net