

ಹರಿದ್ವಾರ : ಉತ್ತರಾಖಂಡದ ಹರಿದ್ವಾರದಲ್ಲಿ ಕಳೆದ ಏಪ್ರಿಲ್ನಲ್ಲಿ ನಡೆದ ಕುಂಭ ಮೇಳದ ಸಂದರ್ಭದಲ್ಲಿ ಖಾಸಗಿ ಲ್ಯಾಬ್ಗಳು ಸುಮಾರು 1 ಲಕ್ಷಕ್ಕೂ ಹೆಚ್ಚು ನಕಲಿ ವರದಿಗಳನ್ನು ನೀಡಿರಬಹುದು ಎಂದು ರಾಜ್ಯ ಆರೋಗ್ಯ ಇಲಾಖೆ ಅನುಮಾನ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಮೇಳದ ಸಮಯದಲ್ಲಿ ಕರೊನಾ ಪರೀಕ್ಷೆಗಳನ್ನು ಮಾಡುವ ಜವಾಬ್ದಾರಿ ವಹಿಸಿಕೊಂಡಿದ್ದ ಖಾಸಗಿ ಲ್ಯಾಬ್ಗಳ ವಿರುದ್ಧ ಹರಿದ್ವಾರ ಜಿಲ್ಲಾಡಳಿತಕ್ಕೆ ಪ್ರಕರಣ ದಾಖಲಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ ಎನ್ನಲಾಗಿದೆ.
ಕುಂಭ ಮೇಳದ ಸಮಯದಲ್ಲಿ ಪ್ರತಿದಿನ 50,000 ಕರೊನಾ ಟೆಸ್ಟ್ಗಳನ್ನು ನಡೆಸಬೇಕೆಂದು ಹೈಕೋರ್ಟ್ ಆದೇಶಿಸಿದ್ದ ಹಿನ್ನೆಲೆಯಲ್ಲಿ, ನಿತ್ಯದ ಖೋಟಾ ಈಡೇರಿಸಲು ಪರೀಕ್ಷೆಯಿಲ್ಲದೆ ನಕಲಿ ಫಲಿತಾಂಶಗಳನ್ನು ನೀಡಿರಬಹುದು ಎಂದು ಭಾವಿಸಲಾಗಿದೆ. ಜಿಲ್ಲಾ ಆರೋಗ್ಯ ಇಲಾಖೆಯು 22 ಖಾಸಗಿ ಲ್ಯಾಬ್ಗಳಿಗೆ ಈ ಕೆಲಸ ನೀಡಿದ್ದು, ಹಲವು ಲ್ಯಾಬ್ಗಳು ವಿವಿಧ ಜನರ ಐಡಿ ಕಾರ್ಡ್ ಮತ್ತು ಫೋನ್ ನಂಬರ್ಗಳನ್ನು ನಮೂದಿಸಿ ನಕಲಿ ವರದಿಗಳನ್ನು ನೀಡಿವೆ ಎಂದು ಪ್ರಾಥಮಿಕ ವರದಿ ಬಂದಿದೆ. ಈ ನಿಟ್ಟಿನಲ್ಲಿ ವಿವರವಾದ ತನಿಖೆಯನ್ನು ಕಳೆದ ವಾರ ಜಿಲ್ಲಾಡಳಿತ ಆದೇಶಿಸಿದೆ ಎನ್ನಲಾಗಿದೆ.
ಕುಂಭ ಮೇಳ ನಿರ್ವಹಣಾ ಮಂಡಳಿಯೂ ಮತ್ತೊಂದು ಆಂತರಿಕ ತನಿಖೆ ಆದೇಶಿಸಿದ್ದು, ಖಾಸಗಿ ಲ್ಯಾಬ್ಗಳ ಕಾರ್ಯವೈಖರಿ ಪರಿಶೀಲಿಸಲು ಸಮಿತಿಯೊಂದನ್ನು ರಚಿಸಿದೆ. “ಮೇಳ ಆಡಳಿತವು ಸೂಚಿಸಿದ ಒಟ್ಟು 2,51,457 ಜನರನ್ನು 11 ಲ್ಯಾಬ್ಗಳು ಪರೀಕ್ಷೆ ಮಾಡಿವೆ. ಅದರಲ್ಲಿ 2,07,159 ಆ್ಯಂಟಿಜನ್ ಟೆಸ್ಟ್ಗಳಾಗಿದ್ದವು ಮತ್ತು 44,278 ಆರ್ಟಿಪಿಸಿಆರ್ ಟೆಸ್ಟ್ಗಳಾಗಿದ್ದವು. 2 ಲಕ್ಷಕ್ಕಿಂತ ಹೆಚ್ಚು ಆ್ಯಂಟಿಜನ್ ಟೆಸ್ಟ್ ಮಾಡಿದ್ದರೂ ಕೇವಲ 1,023 ಜನರಿಗೆ ಪಾಸಿಟೀವ್ ಬಂದಿತ್ತು. ಕೇವಲ 1,250 ಆರ್ಟಿಪಿಸಿಆರ್ ಪಾಸಿಟೀವ್ ವರದಿಗಳು ಬಂದಿದ್ದವು. ಉಳಿದವೆಲ್ಲ ನೆಗೆಟೀವ್ ಬಂದಿತ್ತು" ಎಂದು ಮಹಾಕುಂಭ ಮೇಳದ ಆರೋಗ್ಯ ಅಧಿಕಾರಿ ಡಾ. ಅರ್ಜುನ್ ಸಿಂಗ್ ಸೇನ್ಗರ್ ವಿವರಿಸಿದ್ದಾರೆ. (ಏಜೆನ್ಸೀಸ್)