

ನವದೆಹಲಿ : ಆಕರ್ಷಕ ಸೌಲಭ್ಯಗಳಿರುವ ಕ್ರೆಡಿಟ್ ಕಾರ್ಡ್ ನೀಡುವುದಾಗಿ ಕರೆ ಮಾಡಿ ಜನರಿಂದ ಹಣ ದೋಚುತ್ತಿದ್ದ ನಕಲಿ ಕಾಲ್ ಸೆಂಟರ್ ಒಂದನ್ನು ದೆಹಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ನೂರಾರು ಜನರನ್ನು ಈ ರೀತಿ ವಂಚಿಸಿದ್ದ ನಾಲ್ಕು ಮಹಿಳೆಯರು ಮತ್ತು ಓರ್ವ ಪುರುಷನನ್ನು ಬಂಧಿಸಲಾಗಿದೆ.
ದೆಹಲಿಯ ರೋಹಿಣಿಯಲ್ಲಿ ನಕಲಿ ಕಾಲ್ ಸೆಂಟರ್ ನಡೆಸುತ್ತಿದ್ದ ರಾಹುಲ್ ರಾಥೋರ್(30) ಮತ್ತು ಆತನ ಸಿಬ್ಬಂದಿಯಾಗಿದ್ದ ಮುಸ್ಕಾನ್(21), ಸೋನಂ(26), ಬಬೀತಾ(22) ಮತ್ತು ಕಾಜಲ್(22) ಎಂಬುವರನ್ನು ಪೊಲೀಸರು ನಿನ್ನೆ ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿ ರಾಥೋರ್, ಮುಂಚೆ ನಿಜವಾದ ಬ್ಯಾಂಕ್ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದು, ಹಣ ಮಾಡುವ ಆಸೆಯಿಂದ ಗ್ರಾಹಕರ ಡೇಟಾವನ್ನು ಖರೀದಿಸಿ, ಈ ದಂಧೆ ಆರಂಭಿಸಿದ್ದ ಎನ್ನಲಾಗಿದೆ.
ಆತನ ಕೆಲಸಗಾರರು ಜನರಿಗೆ ಕರೆ ಮಾಡಿ ಕ್ರೆಡಿಟ್ ಕಾರ್ಡ್ ಜೊತೆ ಗಿಫ್ಟ್ ಕಾರ್ಡ್ಸ್, ವಿಐಪಿ ಸೇವಿಂಗ್ ಕಾರ್ಡ್ಸ್, ಆರೋಗ್ಯ ಸೇವೆ ಮುಂತಾದ್ದನ್ನು ಒದಗಿಸಲಾಗುವುದು ಎಂದು ಆಮಿಷ ಒಡ್ಡುತ್ತಿದ್ದರು. ನಂತರ ಅದಕ್ಕಾಗಿ ಹಣ ಪಾವತಿಸಿಕೊಂಡು ವಂಚಿಸುತ್ತಿದ್ದರು ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ ಎಂದು ರೋಹಿಣಿ ಡಿಸಿಪಿ ಪ್ರಣವ್ ತಯಾಲ್ ಹೇಳಿದ್ದಾರೆ. ಕೆ.ಎನ್.ಕಟ್ಜು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದು, ಮುಖ್ಯ ಆರೋಪಿ ರಾಥೋರ್ಗೆ ಡೇಟಾ ಒದಗಿಸುತ್ತಿದ್ದ ಇನ್ನೂ ಇಬ್ಬರು ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ. (ಏಜೆನ್ಸೀಸ್)