ಉದ್ಯೋಗಿಗಳಿಗೆ ಪಂಗನಾಮ ಹಾಕಿದ ನಕಲಿ ಸಿಇಒ! ಕಿರಾತಕನ ಕೋಟಿ ರೂ. ಸಂಚಿಗೆ ಸಂಸ್ಥೆ ಕಂಗಾಲು | Fake CEO

ವಿಜಯವಾಣಿ - 2024-12-02T220229.171
Published on

ನವದೆಹಲಿ: ದಿನದಿಂದ ದಿನಕ್ಕೆ ಸೈಬರ್‌ ಕ್ರಿಮಿನಲ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಯಾವುದೋ ಅಧಿಕಾರಿ, ಇಲಾಖೆ ಹೆಸರೇಳಿಕೊಂಡು ಕೋಟಿ ಕೋಟಿ ರೂಪಾಯಿ ವಂಚನೆ ಮಾಡುವವರ ಸಂಚುಗಳು ಬಹುತೇಕ ಯಶಸ್ವಿಯಾದರೂ ಅಂತಿಮವಾಗಿ ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಇಂತಹ ಕೇಸ್​ಗಳು ಆಗಾಗ್ಗೆ ಮಾಧ್ಯಮಗಳು, ಜಾಲತಾಣಗಳಲ್ಲಿ ಹರಿದಾಡಿದರೂ ಸಹ ಕಿಡಿಗೇಡಿಗಳ ಸಂಚಿಗೆ ಸಿಲುಕುವವರ ಸಂಖ್ಯೆ ಮಾತ್ರ ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಅದಕ್ಕೆ ಬಲವಾದ ಕಾರಣ ಈ ವಂಚನೆ (Fake CEO) ಪ್ರಕರಣ.

ಜನರನ್ನು ವಂಚಿಸಲು ಹೊಸ ತಂತ್ರವನ್ನು ಅನುಸರಿಸಿರುವ ಕಿರಾತಕರು, ವ್ಯವಸ್ಥಾಪಕ ನಿರ್ದೇಶಕರು ಅಥವಾ ಕಂಪನಿ ಸಿಇಒಗಳಂತಹ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿ, ಉದ್ಯೋಗಿಗಳನ್ನು ವಂಚಿಸುವ ಮೂಲಕ ತಮ್ಮ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದಾರೆ. ಇಂತಹದ್ದೇ ವಂಚನೆ ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು, ಆರೋಪಿ ಸಂಸ್ಥೆಗೆ ಬರೋಬ್ಬರಿ 7 ಕೋಟಿ ರೂ. ಪಂಗನಾಮ ಹಾಕಿದ್ದಾನೆ ಎಂದು ಪೊಲೀಸರ ಗುಪ್ತಚರ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ಸ್ ಮಾಹಿತಿ ಹಂಚಿಕೊಂಡಿದೆ.

ಕಳೆದ ಎರಡು ವಾರಗಳಲ್ಲಿ ವರದಿಯಾದ ಮೂರು ಪ್ರಕರಣಗಳಲ್ಲಿ ವಂಚಕರು 7 ಕೋಟಿ ರೂ.ಗೂ ಹೆಚ್ಚು ಹಣವನ್ನು ದೋಚಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಐಎಫ್‌ಎಸ್‌ಒ) ಹೇಮಂತ್ ತಿವಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡ ತಿವಾರಿ, "ಸ್ಕ್ಯಾಮರ್‌ಗಳು ಕಂಪನಿಯ ಮುಖ್ಯಸ್ಥರ ಪ್ರೊಫೈಲ್ ಚಿತ್ರವನ್ನು ಬಳಸಿಕೊಂಡು ನಕಲಿ ವ್ಯಾಟ್ಸ್​ಆ್ಯಪ್ ಖಾತೆಯನ್ನು ರಚಿಸುತ್ತಾರೆ. ಇದನ್ನು ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮ ಅಥವಾ ಕಂಪನಿಯ ವೆಬ್‌ಸೈಟ್‌ಗಳಿಂದ ಪಡೆಯುತ್ತಾರೆ. ನಂತರ ಅಕೌಂಟೆಂಟ್‌ಗಳು, ಇಲ್ಲವೇ ಹಣಕಾಸು ಅಧಿಕಾರಿಗಳನ್ನು ಸಂಪರ್ಕಿಸಿ, ಮೀಟಿಂಗ್​ ಅಥವಾ ಹೆಚ್ಚಿನ ಆದ್ಯತೆಯ ಯೋಜನೆಗಳ ನೆಪದಲ್ಲಿ ತುರ್ತು ನಿಧಿ ವರ್ಗಾವಣೆಗೆ ವಿನಂತಿ ಮಾಡ್ತಾರೆ. ಹೀಗೆ ಮಾಡಿ, ಕಂಪನಿಯ ಮ್ಯಾನೇಜರ್​ ಮತ್ತು ಉದ್ಯೋಗಿಗಳ ಕಣ್ಣಿಗೆ ಮಣ್ಣರೆಚ್ಚಿದ್ದಾರೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net