ಬೆಂಗಳೂರು: ಸರ್ಕಾರದ ವಿವಿಧ ವಸತಿ ಯೋಜನೆ ಫಲಾನುಭವಿಗಳು ಬ್ಯಾಂಕುಗಳಿಂದ ಸಾಲ ಪಡೆದುಕೊಳ್ಳಲು ಹೆಣಗಾಟ ನಡೆಸಿದ್ದು, ಸಮಸ್ಯೆ ಕಗ್ಗಂಟಾಗಿ ಮುಂದುವರಿದಿದೆ. ಮಾಹಿತಿಗಳ ಪ್ರಕಾರ ಬ್ಯಾಂಕುಗಳು ಮತ್ತು ಸರ್ಕಾರದ ನಡುವೆ ಈ ವಿಚಾರ ಪದೇಪದೆ ಚರ್ಚೆಯಾಗುತ್ತಲೇ ಇದ್ದು, ಬಿಕ್ಕಟ್ಟು ಮಾತ್ರ ಶಮನವಾಗುವಂತೆೆ ಕಾಣಿಸುತ್ತಿಲ್ಲ.
ರಾಜೀವ್‌ಗಾಂಧಿ ವಸತಿ ನಿಗಮದ ಅಡಿಯಲ್ಲಿ ವಿವಿಧ ವಸತಿ ಯೋಜನೆಗಳಿಂದ ಮನೆ ಪಡೆದುಕೊಂಡವರಿಗೆ ಸುಲಭವಾಗಿ ಸಾಲ ಸೌಲಭ್ಯ ಸಿಗಬೇಕೆಂಬುದು ಸರ್ಕಾರದ ಅಪೇಕ್ಷೆ. ಸರ್ಕಾರದ ಸಬ್ಸಿಡಿ ಅಥವಾ ಸಹಾಯಧನ ಒಂದು ಭಾಗವಾದರೆ ಲಾನುಭವಿಗಳು ತಮ್ಮ ಪಾಲಿನ ಹಣವನ್ನು ಸಾಲ ಪಡೆದುಕೊಂಡು ಪಾವತಿ ಮಾಡಬೇಕಾಗುತ್ತದೆ. ಹೀಗಾಗಿ ಲಾನುಭವಿಗಳ ಬೆನ್ನಿಗೆ ನಿಲ್ಲಲು ನಿರಂತರವಾಗಿ ಪ್ರಯತ್ನ ಮಾಡಿಕೊಂಡೇ ಬರಲಾಗಿದೆ. ಇನ್ನೊಂದೆಡೆ ಬ್ಯಾಂಕುಗಳು ತಾವು ಸಾಲ ಕೊಡಲು ಸಾಧ್ಯವಾಗದೇ ಇರುವುದಕ್ಕೆ ಒಂದಷ್ಟು ಕಾರಣಗಳನ್ನು ನೀಡುತ್ತಾ ಬಂದಿದೆ. ಒಟ್ಟಾರೆ ಸಮಸ್ಯೆ ಬಗೆಹರಿಯದೇ ತಾಳಮೇಳ ತಪ್ಪಿದಂತಾಗಿದೆ.
ಲಭ್ಯ ಮಾಹಿತಿಗಳ ಪ್ರಕಾರ, ಬ್ಯಾಂಕರುಗಳ ಸಮಿತಿ ಸಭೆಯಲ್ಲಿ ಸರ್ಕಾರ ತನ್ನ ಅಸಮಾಧಾನವನ್ನೂ ದಾಖಲಿಸಿದೆ. ವಸತಿ ಯೋಜನೆಗಳಿಗೆ ಸಾಲ ಅಪೇಕ್ಷಿಸಿರುವವ ಅರ್ಜಿಗಳು ದೊಡ್ಡ ಪ್ರಮಾಣದಲ್ಲಿ ಬ್ಯಾಂಕುಗಳಲ್ಲೇ ಉಳಿದಿವೆ. ಹೀಗಾಗಿ ಕೂಡಲೇ ಕ್ರಮಕೈಗೊಳ್ಳಿ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿಯವರೇ ತಾಕೀತು ಮಾಡಿದ್ದಾರೆ.
ದತ್ತಾಂಶ ಗೊಂದಲ
ಎಷ್ಟು ಮಂದಿಗೆ ಸಾಲ ಅಗತ್ಯವಿದೆ, ಎಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ ಎಂಬ ವಿಚಾರದಲ್ಲೇ ಗೊಂದಲ ಉಳಿದುಕೊಂಡಿದೆ. ಈ ಸಮಸ್ಯೆ ಆರಂಭವಾಗಿ ವರ್ಷವೇ ಕಳೆದಿದೆ.
2024ರ ೆಬ್ರವರಿ 27ರಂದು ನಡೆದಿದ್ದ ಬ್ಯಾಂಕರುಗಳ ಸಭೆಯಲ್ಲಿ ಸರ್ಕಾರದ ದಾಖಲೆ ಪ್ರಕಾರ 52,154 ಅರ್ಜಿಗಳು ಬ್ಯಾಂಕ್‌ಗಳಲ್ಲಿ ಧೂಳು ಹಿಡಿದಿತ್ತು. ಜಿಲ್ಲಾವಾರು ಮತ್ತು ಬ್ಯಾಂಕ್ ವಾರು ಮಾಹಿತಿಯೊಂದಿಗೆ ಸರ್ಕಾರ ತನ್ನ ಬೇಸರ ಹೊರಹಾಕಿ ಗಂಭೀರವಾಗಿ ಪರಿಗಣಿಸಿತ್ತು. ಇಷ್ಟೊಂದು ಅರ್ಜಿಗಳನ್ನು ಬಾಕಿ ಉಳಿಸಿಕೊಂಡರೆ ಹೇಗೆ ಎಂಬುದು ಸರ್ಕಾರದ ಪ್ರಶ್ನೆಯಾಗಿತ್ತು.
ಬ್ಯಾಂಕ್‌ಗಳು ಹೇಳೋದೇನು?
ಸರ್ಕಾರದ ಬಳಿ ಇರುವ ದತ್ತಾಂಶ ಸರಿ ಇಲ್ಲ ಎಂದು ಬ್ಯಾಂಕ್‌ಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿವೆ. ಸರಿಯಾದ ದತ್ತಾಂಶವನ್ನೂ ನಮಗೆ ಕೊಡುತ್ತಿಲ್ಲ. ಒಂದು ವೇಳೆ ಸರ್ಕಾರದ ಕಡೆಯಿಂದ ಸರಿಯಾದ ದತ್ತಾಂಶ ನೀಡಿದರೆ ನಿರ್ದಿಷ್ಟ ಪ್ರಕರಣಗಳನ್ನು ಪರಿಗಣಿಸಿ ಸಮಸ್ಯೆ ಬಗೆಹರಿಸಬಹುದು ಎಂದು ವಾದಿಸಿವೆ.
ಕೊಳಚೆ ನಿರ್ಮೂಲನಾ ಮಂಡಳಿಯವರೇ ಒಂದು ಬಾರಿ ನಮ್ಮ ಲಾನುಭವಿಗಳಿಗೆ ಸಾಲದ ಅಗತ್ಯ ಬೀಳುವುದಿಲ್ಲ ಎಂದು ಹೇಳಿಕೊಂಡವರು ಮತ್ತೊಮ್ಮೆ 23674 ಮಂದಿಗೆ ಸಾಲದ ಅಗತ್ಯವಿದೆ ಎಂದು ಮಾಹಿತಿ ನೀಡುತ್ತಾರೆ ಎಂದು ಬ್ಯಾಂಕ್‌ಗಳು ವಿವರಿಸಿವೆ.
ಸಾಲ ಕೊಡುವುದಕ್ಕೆನು ತೊಂದರೆ?
ಸರ್ಕಾರದ ಯೋಜನೆ ಲಾನುಭವಿಗಳಾದವರಿಗೆ ಸಾಲ ನೀಡುವುದಕ್ಕೇನು ಸಮಸ್ಯೆ ಎಂಬ ಸಾಮಾನ್ಯ ಪ್ರಶ್ನೆ ಎದುರಾಗುತ್ತದೆ. ಆದರೆ ಬ್ಯಾಂಕುಗಳು ಹೇಳುವುದೇ ಬೇರೆ ಕಥೆ. ಸಾಲ ನೀಡುವುದಕ್ಕೆ ನಮಗೆ ಚೌಕಟ್ಟುಗಳಿವೆ. ಅದನ್ನು ಮೀರಿ ಸಾಲ ನೀಡಲು ಬಾರದು. ಅರ್ಜಿಯೊಂದಿಗೆ ಸಲ್ಲಿಕೆ ಮಾಡಬೇಕಾದ ದಾಖಲೆ ನೀಡದೇ ಇರುವುದು, ಅಗತ್ಯವಾದ ಸಿಬಿಲ್ ಸ್ಕೋರ್ ಇಲ್ಲದೇ ಇರುವುದು, ಪ್ರಾಜೆಕ್ಟ್ ಸೈಟ್ ಬಗ್ಗೆ ಕಾನೂನು ಸಲಹೆ ಸಲ್ಲಿಕೆಯಾಗದೇ ಇರುವುದು ಸಾಲ ನೀಡಿಕೆ ಅಡ್ಡಿಯಾಗುತ್ತದೆ ಎಂದು ಬ್ಯಾಂಕ್ ಹಿರಿಯ ಅಧಿಕಾರಿ ವಿಜಯವಾಣಿಗೆ ವಿವರಿಸಿದರು.
ಗೈಡ್‌ಲೈನ್ ಅಗತ್ಯ
ಸಾಲ ನೀಡಿಕೆಯಲ್ಲಿ ವಿಳಂಬ ಧೋರಣೆ ಬಗ್ಗೆ ಸರ್ಕಾರ ಯಾವಾಗ ಸರ್ಕಾರ ಅಸಮಾಧಾನ ಹೊರಹಾಕಿತೋ ಬ್ಯಾಂಕುಗಳು ತಮ್ಮ ವರಸೆ ಬದಲಿಸಿವೆ. ನಮ್ಮ ಬಳಿ 614 ಅರ್ಜಿ ಮಾತ್ರ ಬಾಕಿ ಇದೆ. 50 ಸಾವಿರದಷ್ಟು ಬಾಕಿ ಇಲ್ಲ. ಹಾಗೆಯೇ ಸರಿಯಾದ ಗೈಡ್‌ಲೈನ್ ಅಗತ್ಯವಿದೆ, ಎಸ್‌ಒಪಿ ಕೊಟ್ಟಿಲ್ಲ, ಪ್ರಾಜೆಕ್ಟ್ ಮುಗಿಯುವ ಹಂತಕ್ಕೆ ಬಂದಿದೆ ಎಂದರೆ ಸಾಲ ಕೊಡಬಹುದು. ಇಲ್ಲವಾದರೆ ಸರ್ಕಾರದಿಂದ ಶಿಾರಸು ಆಗಿ ಬರಬೇಕು ಎಂದು ತಮ್ಮ ಅಭಿಪ್ರಾಯ ಸರ್ಕಾರದ ಮುಂದಿಟ್ಟಿವೆ.
ವಸತಿ ಯೋಜನೆ ಫಲಾನುಭವಿಗಳು ಕೊಳಗೇರಿ ವಾಸಿಗಳು ಹಾಗೂ ಬಡವರೇ ಬಹುತೇಕ ಅವರ ಬಳಿ ಸಾಲ ಕ್ಕೆ ಆಧಾರ ಕೊಡಲು ಏನೂ ಇರುವುದಿಲ್ಲ. ಹೀಗಾಗಿ ಬ್ಯಾಂಕ್ ಸಾಲ ಪಡೆಯಲು ಕಷ್ಟ ಆಗುತ್ತಿದೆ. ನಾನೂ ಈ ಕುರಿತು ಮೂರು ನಾಲ್ಕು ಸಭೆ ನಡೆಸಿ ಬ್ಯಾಂಕರ್‌ಗಳ ಜತೆ ಮಾತನಾಡಿದ್ದೇನೆ. ಒಂದೆರಡು ಬ್ಯಾಂಕ್ ಮುಂದೆ ಬಂದು ರಾಜೀವ್ ಗಾಂಧಿ ವಸತಿ ಯೋಜನೆಗೆ ಸಾಲ ನೀಡಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬ್ಯಾಂಕ್ ಮುಂದೆ ಬರುವ ವಿಶ್ವಾಸ ಇದೆ.
– ಜಮೀರ್ ಅಹ್ಮದ್, ವಸತಿ ಸಚಿವ