

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆ (ಪ್ರಾಥಮಿಕ) ಅಧೀನ ಕಾರ್ಯದರ್ಶಿ ಅವರ ಸಹಿ ನಕಲಿ ಮಾಡಿ ಸಿಬಿಎಸ್‌ಸಿ ಪಠ್ಯಕ್ರಮ ಸಂಯೋಜನೆಗೆ ನಿರಾಕ್ಷೇಪಣಾ ಪ್ರಮಾಣಪತ್ರ ಸೃಷ್ಟಿಸಿಕೊಂಡಿದ್ದ ಶಾಲೆ ಆಡಳಿತ ಮಂಡಳಿ ಮತ್ತು ಉದ್ಯಮಿ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎ್ಐಆರ್ ದಾಖಲಾಗಿದೆ.
ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆ (ಪ್ರಾಥಮಿಕ) ಅಧೀನ ಕಾರ್ಯದರ್ಶಿ ಎಂ.ಎ. ಮಹಾಲಕ್ಷ್ಮಿ, ವಿಧಾನಸೌಧ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಮಧ್ಯವರ್ತಿ ಮಂಜಿತ್ ಜೈನ್ ಮತ್ತು ಮುಧೋಳ ರಾಯಲ್ ಶಾಲೆ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2024-25ನೇ ಸಾಲಿನಲ್ಲಿ 1 ರಿಂದ 8ನೇ ತರಗತಿಯವರೆಗೆ ಸಿಬಿಎಸ್‌ಸಿ ಪಠ್ಯಕ್ರಮ ಸಂಯೋಜನೆ ಹೊಂದಲು ಸಿಬಿಎಸ್‌ಸಿ ಅಫಿಲಿಯೇಷನ್ ಮಾಡಿಸಿಕೊಡುವಂತೆ ಮಂಜಿತ್ ಜೈನ್‌ಗೆ ಎಲ್ಲ ದಾಖಲೆಗಳನ್ನು ಶಾಲಾ ಆಡಳಿತ ಮಂಡಳಿ ಕೊಟ್ಟಿದ್ದರು. ಇದಾದ ಮೇಲೆ ಮಂಜಿತ್ ಜೈನ್, ಸಿಬಿಎಸ್ಸಿ ಮಾನ್ಯತೆ ಕೊಡಿಸಿದ್ದು, ಜತೆಗೆ ಶಾಲಾ ಶಿಕ್ಷಣ ಇಲಾಖೆಯಿಂದ ಎನ್‌ಒಸಿ ಸಹ ಕೊಟ್ಟಿಸಿದ್ದ.
ಇತ್ತೀಚೆಗೆ ಅನಾಮಧೇಯ ವ್ಯಕ್ತಿಗಳು, ಶಿಕ್ಷಣ ಇಲಾಖೆಗೆ ದಾಖಲೆ ಸಮೇತ ದೂರು ಸಲ್ಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ಮುಧೋಳ ರಾಯಲ್ ಶಾಲೆಯ ಸಿಬಿಎಸ್‌ಸಿ ಮಾನ್ಯತ ಪ್ರಮಾಣಪತ್ರ ಮತ್ತು ಎನ್‌ಒಸಿಯನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಿ ವರದಿ ಪಡೆದಾಗ ನಕಲಿ ಎಂಬುದು ಗೊತ್ತಾಗಿದೆ.
ಶಾಲಾ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿಯ ಸಹಿಯನ್ನು ನಕಲಿ ಮಾಡಿ ಎನ್‌ಒಸಿ ಮಾಡಿಕೊಟ್ಟವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಮಹಾಲಕ್ಷ್ಮೀ ಅವರು ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.