ಆಸ್ಪತ್ರೆಗಳಿಗೂ ಹುಸಿ ಬಾಂಬ್ ಇಮೇಲ್

fak call
Published on

ಬೆಂಗಳೂರು: ರಾಜಧಾನಿ ಶಾಲೆಗಳಿಗೆ ಹುಸಿ ಬಾಂಬ್ ಇಮೇಲ್ ಪ್ರಕರಣ ಮಾಸುವ ಮೊದಲೇ ಕಿಡಿಗೇಡಿಗಳು ಆಸ್ಪತ್ರೆಗಳಿಗೂ ಸಂದೇಶ ಕಳುಹಿಸಿದ್ದು, ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.

ಭಾನುವಾರ ಮಧ್ಯಾಹ್ನ 3.06ರಲ್ಲಿ ನಗರದ ಪ್ರತಿಷ್ಠಿತ ನಾಗವಾರದ ಸೇಂಟ್ ಫಿಲೋಮಿನಾ, ನಾರಾಯಣ ಹೆಲ್ತ್, ಸಾಗರ್ ಆಸ್ಪತ್ರೆ, ಸಮರ್ಥ, ಜೆಎಂಜೆ ಮತ್ತು ವಿಮಲಾಲಯ್ಯ ಆಸ್ಪತ್ರೆಗಳ ಇಮೇಲ್‌ಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ.

ಇದಲ್ಲದೆ, ಬೆಂಗಳೂರು ನಗರ ಪೊಲೀಸರ ಕೋರ್ಟ್ ವಿಭಾಗದ ಇ-ಮೇಲ್ ಖಾತೆಗೆ ಸಹ ಸಂದೇಶ ಬಂದಿದೆ. ಇದನ್ನು ಗಮನಿಸಿದ ಪೊಲೀಸರು, ಆಸ್ಪತ್ರೆಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಬಾಂಬ್ ಪತ್ತೆ ದಳ, ಶ್ವಾನ ದಳದ ಅಧಿಕಾರಿ, ಸಿಬ್ಬಂದಿ ಆರು ಆಸ್ಪತ್ರೆಗಳಿಗೆ ಭೇಟಿ ಕೊಟ್ಟು ಎಲ್ಲೆಡೆ ಪರಿಶೀಲನೆ ನಡೆಸಿದರು. ಯಾವುದೇ ಅನುಮಾನಸ್ಪದ ಮತ್ತು ಸ್ಫೋಟಕ ವಸ್ತುಗಳು ಪತ್ತೆಯಾಗದ ಕಾರಣ ಇದೊಂದು ಹುಸಿ ಸಂದೇಶ ಎಂದು ಪೊಲೀಸರು ನಿರ್ಧರಕ್ಕೆ ಬಂದಿದ್ದಾರೆ. ಇದರ ನಡುವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಮತ್ತು ಅವರ ಪಾಲಕರು ಬೆಚ್ಚಿಬಿದ್ದಿದ್ದರು. ಕೆಲಕಾಲ ಆತಂಕ ಸೃಷ್ಟಿಯಾಗಿ ಗೊಂದಲಕ್ಕೆ ಎಡೆ ಮಾಡಿಕೊಟ್ಟಿತ್ತು.

ಶಾಲೆಗಳಿಗೆ ಮತ್ತು ಮುಖ್ಯಮಂತ್ರಿ, ಗೃಹ ಸಚಿವರಿಗೆ ಹುಸಿ ಬೆದರಿಕೆ ಪ್ರಕರಣದಲ್ಲಿ ಆರೋಪಿಗಳ ಪತ್ತೆ ಹಚ್ಚುವಲ್ಲಿ ಪೊಲೀಸರಿಗೆ ಸಾಧ್ಯವಾಗಿಲ್ಲ. ಇದರ ನಡುವೆ ಆಸ್ಪತ್ರೆಗಳಿಗೂ ಬಾಂಬ್ ಬೆದರಿಕೆ ಸಂದೇಶ ಕಳುಹಿಸುವ ಮೂಲಕ ಕಿಡಿಗೇಡಿಗಳು ಗೊಂದಲ ಸೃಷ್ಟಿಸುತ್ತಿದ್ದಾರೆ.

ಕೆಲವೇ ತಾಸಿನಲ್ಲಿ ಸ್ಫೋಟ :

ಕಟ್ಟಡಗಳಲ್ಲಿ ಸ್ಫೋಟಕ ಡಿವೈಸ್‌ಗಳನ್ನು ಅಳವಡಿಸಲಾಗಿದೆ. ಕೆಲವೇ ತಾಸಿನಲ್ಲಿ ಸ್ಫೋಟಗೊಳ್ಳಲಿದೆ. ಆಸ್ಪತ್ರೆ ಒಳಗಿರುವ ಅಮಾಯಕ ಜೀವಗಳು ಬಲಿಯಾಗಲಿವೆ. ಇವರ ಪ್ರಾಣ ರಕ್ಷಣೆ ನಿಮ್ಮ ಕೈಯಲ್ಲಿದೆ ಎಂದು ಇಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net