

ನವದೆಹಲಿ: ಪಾಕಿಸ್ತಾನ ಬಾವುಟವನ್ನು ಧರಿಸಿ ಕೈಯಲ್ಲಿ ಗನ್ ಹಿಡಿದು ಭಾರತ ಧ್ವಜವನ್ನು ಕಾಲಲ್ಲಿ ಮೆಟ್ಟಿ ನಿಂತಿರುವ ವ್ಯಕ್ತಿ ಕೋಲ್ಕತ ಮೂಲದವನು ಎನ್ನಲಾದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿತ್ರದಲ್ಲಿರು ವ್ಯಕ್ತಿ ಗನ್ ಅನ್ನು ಭಾರತ ಧ್ವಜಕ್ಕೆ ಗುರಿ ಇಟ್ಟಿರುವುದನ್ನು ಕಾಣಬಹುದಾಗಿದೆ.
ಅನೇಕ ಫೇಸ್ಬುಕ್ ಬಳಕೆದಾರರು ಇದೇ ಚಿತ್ರವನ್ನು ಪೋಸ್ಟ್ ಮಾಡಿ ಹಿಂದಿಯಲ್ಲಿ ಅಡಿಬರಹ ನೀಡಿದ್ದು, ಅದರ ಸಾರಿ ಹೀಗಿದೆ. ಈತ ಕೋಲ್ಕತದ ಮಹೆಶ್ತಲ ಏರಿಯಾದ ಸಂತೋಷ್ಪುರಿ ನಿವಾಸಿಯಾಗಿದ್ದು, ಫೋಟೋವನ್ನು ತುಂಬಾ ವೈರಲ್ ಮಾಡಿದ್ದಕ್ಕೆ ಆತನನ್ನು ಬಂಧಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಸಾಕಷ್ಟು ಮಂದಿ ಈ ಫೋಟೋವನ್ನು ಶೇರ್ ಕೂಡ ಮಾಡಿಕೊಂಡಿದ್ದಾರೆ. ಆ ಫೋಟೋವನ್ನು ನೀವಿಲ್ಲಿ ಕಾಣಬಹುದಾಗಿದೆ.
ಆದರೆ, ಫೋಟೋ ಹಿಂದಿನ ಸತ್ಯಾಸತ್ಯತೆ ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ನಡೆಸಿದ ಫ್ಯಾಕ್ಟ್ಚೆಕ್ನಲ್ಲಿ ಬಹಿರಂಗವಾಗಿದೆ. ಚಿತ್ರವು ಎರಡು ವರ್ಷ ಹಿಂದಿನದು. ಚಿತ್ರದಲ್ಲಿರುವ ವ್ಯಕ್ತಿ ಬಿಹಾರದ ಸಿವಾನ್ ಏರಿಯಾದ ನಿವಾಸಿ ಸಾಜಿದ್ ಹುಸೇನ್. ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ ಬೆನ್ನಲ್ಲೇ ಆತನನ್ನು ಅಂದೇ ಬಂಧಿಸಲಾಗಿತ್ತು.
ಗೂಗಲ್ ರಿವರ್ಸ್ ಸರ್ಚ್ ಇಂಜಿನ್ ಸಹಾಯದಿಂದ ಫೋಟೋವನ್ನು ಹುಡುಕಾಡಿದಾಗ ಅದಕ್ಕೆ ಸಂಬಂಧಿಸಿದ ಸುದ್ದಿ "ಸಿವನ್ ಆನ್ಲೈನ್" ಹೆಸರಿನ ನ್ಯೂಸ್ ವೆಬ್ಸೈಟ್ನಲ್ಲಿ ಸುದ್ದಿ ಪತ್ತೆಯಾಯಿತು. 2018, ಆಗಸ್ಟ್ 30ರಲ್ಲಿ ವರದಿ ಪ್ರಕಟವಾಗಿತ್ತು. ಇದೇ ಸುದ್ದಿ ಪ್ರಭಾತ್ ಖಬರ್ ಎಂಬ ಹಿಂದಿ ವೆಬ್ಸೈಟ್ನಲ್ಲೂ ಅದೇ ದಿನ ವರದಿಯಾಗಿತ್ತು.
ಮಾಧ್ಯಮ ವರದಿಯ ಪ್ರಕಾರ ಸಾಜಿದ್ ಹುಸೇನ್ ಬಿಹಾರದ ಸಿವಾನ್ ಏರಿಯಾದ ತಯ್ಯಬ್ ಹುಸೇನ್ ಮಗ. ಸಾಮಾಜಿಕ ಜಾಲತಾಣದಲ್ಲಿ ಆತನ ಫೋಟೋ ಹರಿದಾಡಿ ಬೆನ್ನಲ್ಲೇ ಭಾರತ ಧ್ವಜಕ್ಕೆ ಅವಮಾನ ಮಾಡಿದ ಆರೋಪದಲ್ಲಿ ಆತನನ್ನು ಬಂಧಿಸಲಾಗಿತ್ತು.
ಇದಕ್ಕೆ ಸಂಬಂಧಿಸಿದ ವಿಡಿಯೋ ವರದಿಯು ಅಹಮ "ಪಂಜಾಬ್ ಕೇಸರಿ ಬಿಹಾರ್" ಎಂಬ ಯೂಟ್ಯೂಬ್ ಚಾನೆಲ್ನಲ್ಲಿ 2018, ಆಗಸ್ಟ್ 31ರಂದು ಪ್ರಕಟವಾಗಿದೆ. ಈ ಎಲ್ಲ ವರದಿಗಳಿಂದ ದೃಢಪಡುವುದೇನೆಂದರೆ ಸದ್ಯ ವೈರಲ್ ಆಗಿರುವ ಫೋಟೋ ಎರಡು ವರ್ಷ ಹಳೆಯದು. ಸದ್ಯ ಈ ಫೋಟೋವನ್ನು ಅಪಪ್ರಚಾರದ ಉದ್ದೇಶವಾಗಿ ಬಳಸಿಕೊಳ್ಳಲಾಗಿದೆ ಎಂಬುದು ಫ್ಯಾಕ್ಟ್ಚೆಕ್ನಲ್ಲಿ ಬಹಿರಂಗವಾಗಿದೆ. (ಏಜೆನ್ಸೀಸ್)