ಭಯಾನಕ ವಿಡಿಯೋ| ಫುಟ್​ಬಾಲ್ ತರಬೇತಿ ವೇಳೆ ಸಿಡಿಲು ಬಡಿತ: ಕೋಮಾಗೆ ಜಾರಿದ ಬಾಲಕ!

Footballer
Published on

ಮಾಸ್ಕೋ: ತರಬೇತಿ ವೇಳೆ ಸಿಡಿಲು ಬಡಿದು ಹದಿನಾರು ವರ್ಷದ ರಷ್ಯಾದ ಫುಟ್ಬಾಲ್​ ಆಟಗಾರನೊಬ್ಬ ಕೋಮಾಗೆ ಜಾರಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಸಿಡಿಲ ಬಡಿತಕ್ಕೆ ಆತನ ಕತ್ತಿನ ಸುತ್ತ ಗಂಭೀರವಾದ ಗಾಯವಾಗಿದೆ.

ಇವಾನ್​​ ಜಬೊರ್ಸ್ಕೈ ಎಂಬ ಬಾಲಕ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಈ ಭಯಾನಕ ಘಟನೆಯು ರಷ್ಯಾ ರಾಜಧಾನಿ ಮಾಸ್ಕೋ ಬಳಿಕ ಒರೆಖವೋ-ಜಿವೋದಲ್ಲಿ ನಡೆದಿದೆ.

ಗೋಲ್​ಕೀಪರ್​ ಆಗಿರುವ ಇವಾನ್​ ತಮ್ಮ ತಂಡದಿಂದ ಪ್ರತ್ಯೇಕವಾಗಿ ತರಬೇತಿ ಪಡೆಯುತ್ತಿದ್ದ. ತನ್ನ ಕತ್ತಿನಲ್ಲಿ ಇವಾನ್​ ಲೋಹದ ಚೈನ್​ ಧರಿಸಿದ್ದ. ಅದಕ್ಕೆ ಸಿಡಿಲು ಬಡಿದಿದೆ.

ಆಘಾತಕಾರಿಯೆಂದರೆ ಸಿಡಿಲು ಬಡಿಯುವಾಗ ಮಳೆ ಬರುವ ಮುನ್ಸೂಚನೆಯೇನು ಇರಲಿಲ್ಲ. ಮೋಡವು ಸಹ ಸ್ಪಷ್ಟವಾಗಿತ್ತು. ಇದೇ ವೇಳೆ ಜ್ನಾಮ್ಯಾ ಟ್ರಾಡಾ ಫುಟ್​ಬಾಲ್​ ಕ್ಲಬ್​ನಿಂದ ತರಬೇತಿ ನಡೆಯುತ್ತಿತ್ತು. ಇದೇ ವೇಳೆ ಇವಾನ್​ಗೆ ಸಿಡಿಲು ಬಡಿದಿದೆ.

ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ವೈರಲ್​ ಆಗಿದ್ದು, ಪೆನಾಲ್ಟಿ ಏರಿಯಾದ ಕೊನೆಯಿಂದ ಬಾಲನ್ನು ಇವಾನ್​ ಒದೆಯುತ್ತಾನೆ. ತಕ್ಷಣವೇ ಆತನಿಗೆ ಸಿಡಿಲು ಬಡಿಯುತ್ತದೆ. ನೆಲದಲ್ಲೇ ಕುಸಿದು ಬೀಳುವ ಆತನನ್ನು ನೋಡಿ ಕೋಚ್​ ಮತ್ತು ತಂಡದ ಸಹ ಆಟಗಾರರು ಧಾವಿಸಿಬರುವುದು ವಿಡಿಯೋದಲ್ಲಿ ದಾಖಲಾಗಿದೆ.

ಪ್ರಜ್ಞೆ ತಪ್ಪಿ ಬಿದ್ದಿದ ಇವಾನ್​ನನ್ನು ಮೊದಲು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹೆಲಿಕಾಪ್ಟರ್​ ಮೂಲಕ ಮಾಸ್ಕೋ ಕ್ಲೀನಿಕ್​ಗೆ ಸ್ಥಳಾಂತರಿಸಲಾಗಿದ್ದು, ಕೋಮಾಗೆ ಜಾರಿರುವ ಇವಾನ್​ ಆರೋಗ್ಯ ಸ್ಥಿತಿ ಸದ್ಯ ಸ್ಥಿರವಾಗಿದೆ. ಕೋಚ್​ ಹಾಗೂ ತಂಡದ ಆಟಗಾರರು ಇವಾನ್ ಚೇತರಿಕೆಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. (ಏಜೆನ್ಸೀಸ್​)​ (ವಿಡಿಯೋ ಕೃಪೆ: ಡೈಲಿ ಮೇಲ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net