

ನವದೆಹಲಿ: ದಿನೇದಿನೆ ಇಂಧನ ದರ ಏರಿಕೆಯಾಗುತ್ತಿರುವ ನಡುವೆಯೇ ಉದ್ರಿಕ್ತ ಯುವಕರ ಗುಂಪೊಂದು ಬಂಕ್ ಒಂದರ ಪೆಟ್ರೋಲ್ ಪಂಪ್ಗಳಿಗೆ ಹಾನಿ ಮಾಡುತ್ತಿರುವ ವಿಡಿಯೋವೊಂದು ತಪ್ಪು ಸಂದೇಶದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅನೇಕ ಫೇಸ್ಬುಕ್ ಬಳಕೆದಾರರು ಎರಡು ನಿಮಿಷ ಎಂಟು ಸೆಕೆಂಡ್ವುಳ್ಳ ವಿಡಿಯೋ ತುಣುಕನ್ನು ಹಿಂದಿ ಅಡಿಬರಹದೊಂದಿಗೆ ಪೋಸ್ಟ್ ಮಾಡಿಕೊಂಡಿದ್ದು, ಅದರ ಸಾರ ಹೀಗಿದೆ... ಸಾರ್ವಜನಿಕರ ಆಕ್ರೋಶವನ್ನು ನೋಡಿ. ದಿನೇದಿನೆ ಹೆಚ್ಚುತ್ತಿರುವ ಪೆಟ್ರೋಲ್ ಹಾಗೂ ಡೀಸೆಲ್ ದರದಿಂದ ಆಕ್ರೋಶಗೊಂಡಿರುವ ಜನರು ಪೆಟ್ರೋಲ್ ಪಂಪ್ಗಳನ್ನು ಧ್ವಂಸ ಮಾಡುತ್ತಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಬರೆಯಲಾಗಿದ್ದು, ಸಾಕಷ್ಟು ವೈರಲ್ ಆಗಿದೆ. ಆ ವಿಡಿಯೋವನ್ನು ನೀವಿಲ್ಲಿ ಕಾಣಬಹುದಾಗಿದೆ.
ಆದರೆ, ಈ ಬಗ್ಗೆ ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ಫ್ಯಾಕ್ಟ್ಚೆಕ್ ನಡೆಸಿದ್ದು, ವೈರಲ್ ಆಗಿರುವ ಪೋಸ್ಟ್ ನಕಲಿಯಾಗಿದ್ದು, ಅದು ಎರಡು ವರ್ಷಗಳ ಹಿಂದಿನ ವಿಡಿಯೋ ಆಗಿದ್ದು, ಪ್ರಸ್ತುತ ಉಂಟಾಗಿರುವ ಇಂಧನ ದರ ಏರಿಕೆಗೆ ಸಂಬಂಧಿಸಿದ್ದಲ್ಲ ಎಂದು ತಿಳಿದುಬಂದಿದೆ.
ಹಾಗದ್ರೆ ವಿಡಿಯೋ ಎಲ್ಲಿಯದ್ದು?
ಗೂಗಲ್ ರಿವರ್ಸ್ ಸರ್ಚ್ ಇಂಜಿನ್ ಸಹಾಯದ ಮೂಲಕ ವಿಡಿಯೋವನ್ನು ಹುಡುಕಾಡಿದಾಗ ಇದೇ ವಿಡಿಯೋ 2018ರಲ್ಲಿ ವೈರಲ್ ಆಗಿತ್ತು ಹಾಗೂ ಈ ಘಟನೆ ಒಡಿಶಾದ ಪುರಿಯಲ್ಲಿ ನಡೆದಿತ್ತು ಎಂದು ತಿಳಿದುಬಂದಿದೆ. ಫ್ಯಾಕ್ಟ್ಚೆಕ್ ವೆಬ್ಸೈಟ್ ಬೂಮ್ ಕೂಡ ವೈರಲ್ ಪೋಸ್ಟ್ ನಕಲಿ ಎಂದು ಸಾಬೀತು ಪಡಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ "ಒಡಿಶಾ ಟಿವಿ" ಮತ್ತು "ಒಡಿಶಾ ಬೈಟ್ಸ್" ಎಂಬ ನೂಸ್ ಚಾನೆಲ್ 2018ರ ಸೆಪ್ಟೆಂಬರ್ 29ರಂದು ವರದಿಯನ್ನು ಮಾಡಿವೆ.
ನ್ಯೂಸ್ ಚಾನೆಲ್ಗಳ ವರದಿಯ ಪ್ರಕಾರ 2018ರ ಸೆಪ್ಟೆಂಬರ್ 28ರಂದು ಪುರಿಯ ಮೆಡಿಕಲ್ ಛಾಕ್ ಬಳಿ ಈ ಉದ್ವಿಘ್ನತೆ ಉಂಟಾಗಿತ್ತು. ಪೆಟ್ರೋಲ್ ಪಂಪ್ ಸಿಬ್ಬಂದಿ ಕಡಿಮೆ ಪೆಟ್ರೋಲ್ ಹಾಕುತ್ತಿದ್ದಾರೆ ಎಂದು ಗ್ರಾಹಕರೊಬ್ಬರು ದೂರು ನೀಡಿದಾಗ, ಸ್ಥಳೀಯರು ಪೆಟ್ರೋಲ್ ಪಂಪ್ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಗುಂಪು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಕೂಡ ನಡೆಸಿದ್ದರು.
ಅಂತಿಮ ತೀರ್ಮಾನವೇನು?
ಫ್ಯಾಕ್ಟ್ಚೆಕ್ ಪ್ರಕಾರ ವೈರಲ್ ಆಗಿರುವ ವಿಡಿಯೋಗೂ ಪ್ರಸ್ತುತ ಇಂಧನ ದರ ಏರಿಕೆಗೂ ಸಂಬಂಧವಿಲ್ಲ. ತಪ್ಪು ಮಾಹಿತಿ ಹರಡುವ ಉದ್ದೇಶದಿಂದ ಎರಡು ವರ್ಷದ ಹಿಂದಿನ ವಿಡಿಯೋವನ್ನು ಈಗ ಮತ್ತೊಮ್ಮೆ ವೈರಲ್ ಮಾಡಿದ್ದಾರೆ. ಇನ್ನೊಂದೆಡೆ ದೇಶಾದ್ಯಂತ ಪೆಟ್ರೋಲ್ ಬೆಲೆ ದಿನೇದಿನೆ ಏರಿಕೆಯಾಗುತ್ತಿದ್ದು, 80ರ ಗಡಿ ದಾಟಿ ಮುನ್ನುಗ್ಗುತ್ತಿದೆ. (ಏಜೆನ್ಸೀಸ್)