

ನವದೆಹಲಿ: ಟಿಕ್ ಟಾಕ್ನಲ್ಲಿ ಭಾರಿ ಜನಪ್ರಿಯತೆ ಹೊಂದಿದ್ದ ನೃತ್ಯಗಾರ್ತಿ, ನಟಿ ಸಿಯಾ ಕಕ್ಕರ್ (16) ಗುರುವಾರ (ಜೂನ್ 25) ದೆಹಲಿಯ ಪ್ರೀತ್ ವಿಹಾರದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವುದು ಮತ್ತೊಮ್ಮೆ ಬಾಲಿವುಡ್ ಮಂದಿಗೆ ಶಾಕ್ ಆಗಿದೆ. ಸಿಯಾ ಏಕೆ ಆತ್ಮಹತ್ಯೆ ಮಾಡಿಕೊಂಡರು ಎಂಬುದರ ಬಗ್ಗೆ ಇನ್ನು ಖಚಿತತೆ ಇಲ್ಲ. ಆದರೆ, ಅವರ ಕುಟುಂಬವು ಸ್ಪೋಟಕ ಮಾಹಿತಿಯೊಂದನ್ನು ಹೊರಗೆಡವಿದೆ.
ಕುಟುಂಬ ಮೂಲಗಳ ಪ್ರಕಾರ ಸಿಯಾಗೆ ಅಂತಾರ್ಜಾಲದಲ್ಲಿ ಸಾಕಷ್ಟು ಬೆದರಿಕೆಗಳು ಬರುತ್ತಿದ್ದವು ಎಂದು ತಿಳಿಸಿದ್ದಾರೆ. ಈ ಬಗ್ಗೆ ಸಿಯಾ ತುಂಬಾ ಚಿಂತೆಗೀಡಾಗಿದ್ದಳು ಎಂದು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ವರದಿ ನಂತರವಷ್ಟೇ ಟಿಕ್ಟಾಕ್ ನಟಿಯ ಸಾವಿಗೆ ಕಾರಣವೇನೆಂಬುದು ಗೊತ್ತಾಗಲಿದೆ.
ಇನ್ನು ಸಿಯಾ ಆತ್ಮಹತ್ಯೆಗೂ ಒಂದು ಗಂಟೆ ಮುಂಚೆ ತಮ್ಮ ಕಟ್ಟಡದ ಟೆರೆಸ್ನಲ್ಲಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದರು. ವಿಡಿಯೋದಲ್ಲಿ ನಗುಮುಖದಿಂದಲೇ ನಟಿಸಿದ್ದಳು. ಇದಾದ ಕೆಲವೇ ಹೊತ್ತಲ್ಲಿ ನೇಣಿಗೆ ಶರಣಾಗಿದ್ದಾಳೆ.
ಸಿಯಾ ಕಕ್ಕರ್ ಆತ್ಮಹತ್ಯೆ ವಿಚಾರವನ್ನು ಮ್ಯಾನೇಜರ್ ಅರ್ಜುನ್ ಸರೀನ್ ನಿನ್ನೆಯಷ್ಟೇ ಟ್ವೀಟ್ ಮೂಲಕ ಖಚಿತಪಡಿಸಿದ್ದರು. ಸಿಯಾ ಬಗ್ಗೆ ಮಾತನಾಡಿದ್ದ ಅರ್ಜುನ್, ಆತ್ಮಹತ್ಯೆಗೆ ವೈಯಕ್ತಿಕ ವಿಚಾರಗಳೇ ಕಾರಣವಾಗಿರಬೇಕು. ಏಕೆಂದರೆ, ಕೆಲಸದ ವಿಚಾರದಲ್ಲಿ ಆಕೆ ಉತ್ತಮವಾಗಿದ್ದಳು ಎಂದು ಅರ್ಜುನ್ ಹೇಳಿದ್ದಾರೆ. ಸಿಯಾಳ ಎಲ್ಲ ಕೆಲಸ ಹಾಗೂ ಜಾಹೀರಾತುಗಳ ನಿರ್ವಹಣೆಯನ್ನು ಅರ್ಜುನ್ ನೋಡಿಕೊಳ್ಳುತ್ತಿದ್ದರು.
ಹೊಸ ಯೋಜನೆಯೊಂದರ ವಿಚಾರವಾಗಿ ಆಕೆಯ ಜತೆ ಕಳೆದ ರಾತ್ರಿಯಷ್ಟೇ ಚರ್ಚಿಸಿದ್ದೆ. ಆಕೆ ಎಂದಿನಂತೆ ಸಹಜವಾಗಿಯೇ ಮಾತನಾಡಿದ್ದಳು. ಆಕೆ ಪ್ರತಿಭಾವಂತೆಯಾಗಿದ್ದಳು ಎಂದು ಅರ್ಜುನ್ ಹೇಳಿದ್ದಾರೆ.
ಇನ್ನು ಸಿಯಾ ಕಕ್ಕರ್ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಳು. ಟಿಕ್ಟಾಕ್, ಇನ್ಸ್ಟಾಗ್ರಾಂ, ಸ್ನ್ಯಾಪ್ ಚಾಟ್ ಯೂಟ್ಯೂಬ್ಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಳು. ಟಿಕ್ಟಾಕ್ನಲ್ಲಿ ನೃತ್ಯದ ಮೂಲಕ ಹೆಚ್ಚು ಜನಪ್ರಿಯತೆ ಹೊಂದಿದ್ದ ಈಕೆಗೆ 11 ಲಕ್ಷ ಫಾಲೋವರ್ಗಳಿದ್ದರು. (ಏಜೆನ್ಸೀಸ್)