

ಮುಂಬೈ: ದೀರ್ಘಕಾಲಿ ಕ್ಯಾನ್ಸರ್ನಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್(67) ಅವರು ಗುರುವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾದರು. ಅಸಂಖ್ಯಾತ ಅಭಿಮಾನಿಗಳನ್ನು ದುಃಖದಲ್ಲಿ ಬಿಟ್ಟು ಇಹಲೋಕ ತ್ಯಜಿಸಿದರು. ನಿಧನರಾದ ಕೆಲವೇ ಸಮಯದಲ್ಲಿ ಕಪೂರ್ ಮುಂದೆ ವ್ಯಕ್ತಿಯೊಬ್ಬ ನಿಂತು ಹಾಡುತ್ತಿರುವ ವಿಡಿಯೋವೊ0ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭಿಸಿತು.
ವಿಡಿಯೋದಲ್ಲಿ ಕಪೂರ್ ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವಾಗ ಅವರ ಮುಂದೆ ನಿಂತ ವ್ಯಕ್ತಿಯೊಬ್ಬ ಕಪೂರ್ ಅವರ ಸೂಪರ್ ಹಿಟ್ "ದಿವಾನ" ಚಿತ್ರದ "ತೇರೆ ದಾರ್ದ್ ಸೆ ದಿಲ್ ಆಬಾದ್ ರಹಾ" ಹಾಡನ್ನು ಹಾಡಿದ್ದಾರೆ. ಬಳಿಕ ಕಪೂರ್ ಆ ವ್ಯಕ್ತಿಯನ್ನು ಆಶೀರ್ವದಿಸುತ್ತಾರೆ. ಇದೀಗ ಈ ವಿಡಿಯೋವನ್ನು ನೆಟ್ಟಿಗರು ಕಪೂರ್ ಅವರ ಕೊನೆಯ ವಿಡಿಯೋ ಎಂದು ವೈರಲ್ ಮಾಡಲಾಗುತ್ತಿದ್ದಾರೆ.
ಭಾರೀ ವೀಕ್ಷಣೆ ಗಿಟ್ಟಿಸಿದ ವಿಡಿಯೋ
ನಗ್ಮಾ ಹೆಸರಿ ಟ್ವಿಟರ್ ಬಳಕೆದಾರರೊಬ್ಬರು, ಕಪೂರ್ ಅವರು ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ವೈದ್ಯರೊಂದಿಗೆ ಇರುವ ಈ ವಿಡಿಯೋ ತುಣುಕು ಕಳೆದ(ಬುಧವಾರ) ರಾತ್ರಿಯದು. ರಿಷಿಜಿ ನೀವೆಂದಿಗೂ ಓರ್ವ ಲೆಜೆಂಡ್. ನೀವು ಯಾವಾಗಲೂ ನಮ್ಮ ಹೃದಯ ಮತ್ತು ಮನಸ್ಸಿನಲ್ಲಿ ಉಳಿಯುತ್ತೀರಾ ಎಂದು ಬರೆದುಕೊಂಡಿದ್ದಾರೆ. ಈಗಾಗಲೇ ಆ ವಿಡಿಯೋವನ್ನು 1.74 ಲಕ್ಷಕ್ಕೂ ಅಧಿಕ ಮಂದಿ ಹೆಚ್ಚು ವೀಕ್ಷಣೆ ಮಾಡಿದ್ದಾರೆ. ಆ ವಿಡಿಯೋವನ್ನು ನೀವಿಲ್ಲಿ ಕಾಣಬಹುದು.
ಫ್ಯಾಕ್ಟ್ಚೆಕ್ನಲ್ಲಿ ತಿಳಿದುಬಂದಿದ್ದೇನು?
ಆದರೆ, ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ನಡೆಸಿದ ಫ್ಯಾಕ್ಟ್ಚೆಕ್ನಲ್ಲಿ ವೈರಲ್ ಆಗಿರುವ ವಿಡಿಯೋ 3 ತಿಂಗಳು ಹಳೆಯದ್ದು ಎಂದು ತಿಳಿದುಬಂದಿದೆ. ಫೆಬ್ರವರಿಯ ಮೊದಲ ವಾರದಲ್ಲಿ ವಿಡಿಯೋವನ್ನು ಸೆರೆಹಿಡಿಯಲಾಗಿದೆ. ದೆಹಲಿ ಸಾಕೆತ್ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಗೆ ಕಪೂರ್ ಅವರು ದಾಖಲಾಗಿದ್ದಾಗ ಸೆರೆಹಿಡಿಯಲಾಗಿತ್ತು.
ಅನೇಕ ಮಾಧ್ಯಮಗಳ ಸಹ ಆರಂಭದಲ್ಲಿ ವಿಡಿಯೋವನ್ನು ಕಪೂರ್ ಅವರ ಕೊನೆಯ ವಿಡಿಯೋ ಎಂದೇ ವರದಿ ಮಾಡಿದ್ದವು. ಆದರೆ, ಕೊನೆಯಲ್ಲಿ ಸತ್ಯಾಂಶ ಗೊತ್ತಾಗಿ ಅದನ್ನು ಸರಿಪಡಿಸಿಕೊಂಡಿವೆ.
ವಿಡಿಯೋದ ಒಂದು ಫ್ರೇಮ್ ತೆಗೆದುಕೊಂಡು ಗೂಗಲ್ ರಿವರ್ಸ್ ಸರ್ಚ್ ಇಂಜಿನ್ನಲ್ಲಿ ಹುಡುಕಿದಾಗ ಧೀರಜ್ ಕುಮಾರ್ ಸನು (DHEERAJ KUMAR SANU) ಹೆಸರಿನ ಯೂಟ್ಯೂಬ್ನಲ್ಲಿ ಕಳೆದ ಫೆಬ್ರವರಿ 3ರಲ್ಲಿ ಅಪ್ಲೋಡ್ ಆಗಿರುವುದು ಕಂಡುಬಂದಿದೆ. ಇದೇ ವ್ಯಕ್ತಿ ಕಪೂರ್ರೊಂದಿಗಿನ ಸೆಲ್ಫಿಯನ್ನು ತಮ್ಮ ಫೇಸ್ಬುಕ್ನಲ್ಲಿ ಫೆ. 4ರಂದು ಹಂಚಿಕೊಂಡಿದ್ದಾರೆ.
ಇಂಡಿಯಾ ಟುಡೆ ಫ್ಯಾಕ್ಟ್ಚೆಕ್ ತಂಡ ಧೀರಜ್ ಅವರನ್ನು ಸಂಪರ್ಕಿಸಿದಾಗ ಕಪೂರ್ ಅವರು ದೆಹಲಿಯ ಸಾಕೇತ್ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಾಗಿದ್ದಾಗ ಫೆ. 1 ಮತ್ತು 2ರಲ್ಲಿ ವಿಡಿಯೋ ಸೆರೆಹಿಡಿದಿದ್ದಾಗಿ ತಿಳಿಸಿದ್ದಾರೆ. ಧೀರಜ್ ಅದೇ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿದ್ದಾರೆ. ಉತ್ತರಖಂಡದ ರಾಣಿಖೆತ್ ಮೂಲದ ಧೀರಜ್ ಪ್ರಸ್ತುತ ದೆಹಲಿಯ ಮೆಹ್ರೌಲಿ ಏರಿಯಾದಲ್ಲಿ ವಾಸವಿದ್ದಾರೆ.
ಮ್ಯಾಕ್ಸ್ ಆಸ್ಪತ್ರೆಯು ಸಹ ಈ ಮಾಹಿತಿಯನ್ನು ಖಚಿತಪಡಿಸಿದ್ದು, ಕಪೂರ್ ಅವರು ಫೆಬ್ರವರಿ ಮೊದಲ ವಾರದಲ್ಲಿ ದಾಖಲಾಗಿದ್ದರು ಎಂದು ತಿಳಿಸಿದೆ. ಫೆ.2ರಲ್ಲಿ ಕೆಲವು ಮಾಧ್ಯಮ ವರದಿಗಳು ಸಹ ಬಂದಿವೆ. ಸೋಂಕಿನಿಂದಾಗಿ ಕಪೂರ್ ಅವರು ದಾಖಲಾಗಿದ್ದರು ಎಂದು ತಿಳಿಸಿದೆ.
ಇಲ್ಲಿಗೆ ಸ್ಪಷ್ಟವಾಗುವುದೇನೆಂದರೆ ವೈರಲ್ ವಿಡಿಯೋವನ್ನು ಮುಂಬೈ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಕಪೂರ್ ನಿಧನರಾಗುವ ಮುನ್ನ ಸೆರೆಹಿಡಿಯಲಾಗಿಲ್ಲ. ಅದನ್ನು ಫೆಬ್ರವರಿ ಮೊದಲ ವಾರದಲ್ಲಿ ದೆಹಲಿಯ ಮ್ಯಾಕ್ಸ್ ಆಸ್ಪತ್ರೆಗೆ ಕಪೂರ್ ದಾಖಲಾಗಿದ್ದಾಗ ಸೆರೆಹಿಡಿದಂತಹ ವಿಡಿಯೋವಾಗಿದೆ. ಹಾಡು ಹೇಳುತ್ತಿರುವ ವ್ಯಕ್ತಿ ವೈದ್ಯನಲ್ಲ. ಅವರೊಬ್ಬ ವಾರ್ಡ್ ಬಾಯ್. (ಏಜೆನ್ಸೀಸ್)