90 ದಿನಗಳ ಹಳೇ ಸುದ್ದಿಗಳನ್ನು ಶೇರ್​ ಮಾಡಿದರೆ ಗುಟ್ಟು ಬಯಲು ಮಾಡುತ್ತೆ ಫೇಸ್​ಬುಕ್​

facebook
Published on

ನವದೆಹಲಿ: ದಿನಂದಿಂದ ದಿನಕ್ಕೆ ಫೇಸ್​ಬುಕ್​ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸಣ್ಣ ಮಕ್ಕಳಿಂದ ಹಿಡಿದು, ಹಿರಿಯ ನಾಗರಿಕರವರೆಗೆ ಫೇಸ್​ಬುಕ್​ ನೋಡದೆ ದಿನ ಕಳೆಯಲು ಸಾಧ್ಯವೇ ಇಲ್ಲ ಎಂಬ ಭಾವನೆ ಮೂಡುತ್ತಿದೆ. ಇದೇ ಸಂದರ್ಭದಲ್ಲಿ ಜನರು ತಮ್ಮ ಕೈಗೆ ಸಿಕ್ಕ, ತುಂಬಾ ಚೆನ್ನಾಗಿದೆ ಎಂದೋ ಅಥವಾ ಹಾಸ್ಯಮಯವಾಗಿದೆ ಎಂದೋ ಪೋಸ್ಟ್​ಗಳನ್ನು ಫಾರ್ವರ್ಡ್​ ಮಾಡುವುದನ್ನು ರೂಢಿಸಿಕೊಳ್ಳುತ್ತಿದ್ದಾರೆ.

ಆದರೆ, ತಾವು ಪಾರ್ವರ್ಡ್​ ಮಾಡುತ್ತಿರುವ ಪೋಸ್ಟ್​ ತುಂಬ ಹಳೆಯದ್ದೋ ಎಂಬುದನ್ನು ವಿವೇಚಿಸದೆ ಫಾರ್ವರ್ಡ್​ ಮಾಡುತ್ತಾರೆ. ಈ ಫಾರ್ವರ್ಡ್​ ಮಾಡಿರುವ ಸಂದೇಶವನ್ನು ಹಿಂದೆಯೇ ಓದಿದ್ದವರಿಗೆ ಅಥವಾ ಅದಕ್ಕೂ ಮೊದಲೇ ಬೇರೆಯವರಿಂದ ಅದು ಫಾರ್ವರ್ಡ್​ ಆಗಿದ್ದರೆ, ಅವರಿಗೆ ಬೇಸರ ಆಗುವುದು ಸಹಜ.

ಇದನ್ನು ಅರ್ಥ ಮಾಡಿಕೊಂಡಿರುವ ಫೇಸ್​ಬುಕ್​ ಇದೀಗ ತನ್ನ ಸೌಲಭ್ಯಕ್ಕೆ ಹೊಸದೊಂದು ಸೌಲಭ್ಯ ಸೇರ್ಪಡೆಗೊಳಿಸುತ್ತಿದೆ. ಅಂದರೆ, 90 ದಿನಗಳ ನಂತರದಲ್ಲೂ ಮೆಸೇಜ್​ ಫಾರ್ವರ್ಡ್​ ಆದರೆ, ಅದು ಹಳಸಲು ಎಂದು ತಿಳಿಸಿಕೊಡುತ್ತದೆ. ಅಂದರೆ, ನೀವು ಫಾರ್ವರ್ಡ್​ ಮಾಡುತ್ತಿರುವ ಸುದ್ದಿ ಅಥವಾ ಮೆಸೇಜ್​ ಇಂದಿಗೂ ಪ್ರಸ್ತುತ ಹೌದೇ, ಅಲ್ಲವೇ ಎಂಬುದನ್ನು ಅದು ತಿಳಿಸಲಿದೆ.

ಕಳೆದ ಕೆಲವು ತಿಂಗಳಿಂದ ನಮ್ಮ ಆಂತರಿಕ ಸಂಶೋಧನಾ ತಂಡ ಫೇಸ್​ಬುಕ್​ನಲ್ಲಿ ಪ್ರಕಟವಾಗುವ ಮಾಹಿತಿಗಳು ಹೆಚ್ಚು ಪ್ರಸ್ತುತೆಯನ್ನು ಹೊಂದಿರುವುದು ತುಂಬಾ ಮುಖ್ಯ ಎಂಬ ಸತ್ಯವನ್ನು ಕಂಡುಕೊಂಡಿದೆ. ಆದ್ದರಿಂದ, ಆ ಮಾಹಿತಿಯು ಈಗಲೂ ಪ್ರಸ್ತುತವೇ, ಅದರ ನಂತರದಲ್ಲಿ ಏನೊಂದು ಬೆಳವಣಿಗೆ ಆಗಿಲ್ಲವೇ, ಅದನ್ನು ಶೇರ್​ ಮಾಡುವುದು ಔಚಿತ್ಯಪೂರ್ಣವೇ ಎಂಬುದನ್ನು ಜನರಿಗೆ ತಿಳಿಸಿಕೊಡುವುದು ಅಗತ್ಯ ಎಂಬುದನ್ನು ಮನಗಂಡಿರುವುದಾಗಿ ಫೇಸ್​ಬುಕ್​ನ ಫೀಡ್​ ಆ್ಯಂಡ್​ ಸ್ಟೋರೀಸ್​ ವಿಭಾಗದ ಉಪಾಧ್ಯಕ್ಷ ಜಾನ್​ ಹೆಗೆಮನ್​ ಹೇಳಿದ್ದಾರೆ.

ಅಷ್ಟೇ ಅಲ್ಲ, ಆ ವಿಷಯವಾಗಿ ಆಗಿರಬಹುದಾದ ಬೆಳವಣಿಗೆಗಳನ್ನು ಆಧರಿಸಿ, ಹೊಸದಾಗಿ ಮಾಹಿತಿಯನ್ನು ಪ್ರಕಟಿಸಲು ಬರಹಗಾರರಿಗೆ ಅನುಕೂಲವೂ ಆಗುತ್ತದೆ ಎಂದು ತಿಳಿಸಿದ್ದಾರೆ.

ಹಾಗಾಗಿ, 90 ದಿನಗಳ ಹಳೆಯದಾದ ಮಾಹಿತಿಯನ್ನು ಶೇರ್​ ಮಾಡಲು ಯಾರಾದರೂ ಮುಂದಾದರೆ, ಅದನ್ನು ಸೂಚಿಸುವ ನೋಟಿಫಿಕೇಷನ್​ ಸ್ಕ್ರೀನ್​ ಮೇಲೆ ಮೂಡುವಂತೆ ಮಾಡಲಾಗಿದೆ. ಆ ಮಾಹಿತಿ ಇನ್ನೂ ಪ್ರಸ್ತುತವೆಂದೋ ಅಥವಾ ಚೆನ್ನಾಗಿದೆ ಎಂದು ಅನಿಸಿದಲ್ಲಿ, ಅದನ್ನು ಫಾರ್ವರ್ಡ್​ ಮಾಡಲು ಅವಕಾಶ ಇರುತ್ತದೆ. ಪ್ರಸ್ತುತ ಅನಿಸದಿದ್ದರೆ, ಅದನ್ನು ಫಾರ್ವರ್ಡ್​ ಮಾಡದೆ ಹಾಗೆಯೂ ಬಿಡಬಹುದಾಗಿದೆ ಎಂದು ವಿವರಿಸಿದ್ದಾರೆ.

ಇನ್​ಸ್ಟಾಗ್ರಾಂ ಕೂಡ ಕಳೆದ ವರ್ಷ ಅವಾಚ್ಯವಾದ ಅಥವಾ ನಿಂದನೀಯ ಸಂದೇಶಗಳು ಎನಿಸಿದ್ದನ್ನು ಅಥವಾ ಯಾರಿಗಾದರೂ ನೋವುಂಟು ಮಾಡುತ್ತದೆ ಎಂಬಂಥ ಸಂದೇಶಗಳನ್ನು ಫಾರ್ವರ್ಡ್​ ಮಾಡದ ರೀತಿಯಲ್ಲಿ ತನ್ನ ಬಳಕೆದಾರರ ಸ್ಕ್ರೀನ್​ ಮೇಲೆ ನೋಟಿಫಿಕೇಷನ್​ ಮೂಡುವ ರೀತಿಯಲ್ಲಿ ಸೌಲಭ್ಯ ಕಲ್ಪಿಸಿತ್ತು. ಟ್ವಿಟ್ಟರ್​ ಕೂಡ ಇಂಥದ್ದೇ ಸೌಲಭ್ಯ ಕಲ್ಪಿಸುವುದಾಗಿ ಜೂನ್​ನಲ್ಲಿ ತಿಳಿಸಿತ್ತು. ಆದರೆ, ಈ ಸೌಲಭ್ಯವಿನ್ನೂ ಟ್ವಿಟ್ಟರ್​ಗೆ ಬಂದಿಲ್ಲ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net