ಫೇಸ್​ಬುಕ್​ನಲ್ಲಿ ಲವ್​​ ಮಾಡಿ ಯುವಕನನ್ನು ಮದ್ವೆಯಾದ ತೃತೀಯಲಿಂಗಿಯ ಬಾಳು ಇದೀಗ ಗೋಳು..!

FB Love
Published on

ಏಳೂರು: ಫೇಸ್​ಬುಕ್​ನಲ್ಲಿ ಹುಟ್ಟಿದ ಪ್ರೀತಿಯೊಂದು ರೋಚಕ ಟ್ವಿಸ್ಟ್​ ಪಡೆದುಕೊಂಡರೂ ಹಿರಿಯರ ಒಪ್ಪಿಗೆಯಿಂದ ಮದುವೆಯಾಗಿ ಇದೀಗ ವರದಕ್ಷಿಣೆ ಕಿರುಕುಳ ಆರೋಪದಡಿಯಲ್ಲಿ ಫೇಸ್​ಬುಕ್​ ಪ್ರೇಮ ಪ್ರಕರಣ ಪೊಲೀಸ್​ ಠಾಣೆಯ ಮೆಟ್ಟಿಲೇರಿದೆ.

ವಿವರಣೆಗೆ ಬರುವುದಾದರೆ, ಆಂಧ್ರ ಪ್ರದೇಶದ ಏಳೂರು ಮೂಲದ ತಾರಕ ಅಲಿಯಾಸ್​ ಪಾಂಡುಗೆ ಫೇಸ್​ಬುಕ್​ನಲ್ಲಿ ಭೂಮಿ ಹೆಸರಿನ ಯುವತಿಯ ಪರಿಚಯವಾಗುತ್ತದೆ. ಇಬ್ಬರ ನಡುವಿನ ಪರಿಚಯ ತದನಂತರದಲ್ಲಿ ಪ್ರೀತಿಗೆ ತಿರುಗುತ್ತದೆ. ಆದರೆ, ಇಬ್ಬರ ಪ್ರೀತಿ ಒಂದು ತಿರುವು ಪಡೆದುಕೊಳ್ಳುತ್ತದೆ. ಏನೆಂದರೆ, ಭೂಮಿ ಹೆಸರಿನ ಯುವತಿ ಯುವತಿಯೇ ಅಲ್ಲ. ಬದಲಾಗಿ ಆಕೆ ತೃತೀಯ ಲಿಂಗಿ ಎಂಬುದು ಪಾಂಡುಗೆ ತಿಳಿಯುತ್ತದೆ.

ಆದರೂ ಪಾಂಡು ತನ್ನ ಪ್ರೀತಿಯನ್ನು ಮುಂದುವರಿಸುತ್ತಾನೆ. ಮದುವೆಗೂ ಒಪ್ಪಿಗೆ ನೀಡುತ್ತಾನೆ. ಅದರಂತೆ 2020ರ ಜನವರಿಯಲ್ಲಿ ಹಿರಿಯರ ಒಪ್ಪಿಗೆ ಪಡೆದು ಆಕೆಯನ್ನು ಮದುವೆಯೂ ಆಗುತ್ತಾನೆ. ಒಂದು ವರ್ಷ ಚೆನ್ನಾಗಿಯೇ ಸಂಸಾರ ನಡೆಸುತ್ತಾರೆ. ಆದರೆ, ಇಬ್ಬರ ನಡುವೆ ಇದೀಗ ಏನು ನಡೆದಿದೆಯೋ ತಿಳಿದಿಲ್ಲ. ಪಾಂಡು ಆಕೆಯನ್ನು ಬೇಡ ಎನ್ನುತ್ತಿದ್ದಾನೆ.

ಕುಟುಂಬ ಇಬ್ಬರನ್ನು ಒಂದು ಮಾಡಿದರು ಸಹ ಇಬ್ಬರ ನಡುವೆ ಮಾತ್ರ ಹೊಂದಾಣಿಕೆ ಆಗುತ್ತಿಲ್ಲ. ಆದರೆ, ವರದಕ್ಷಿಣೆಗಾಗಿ ಪಾಂಡು, ಆಕೆಗೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಇದೀಗ ಹೈದರಾಬಾದ್​ ಮೂಲದ ಭೂಮಿ ಪಾಂಡು ವಿರುದ್ಧ ಹೈದರಾಬಾದ್​ನ ಎಲ್​ಬಿ ನಗರದ ಪೊಲೀಸ್​ ಠಾಣೆಗೆ ದೂರು ದಾಖಲಿಸಿದ್ದಾರೆ. (ಏಜೆನ್ಸೀಸ್​) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net