ಫೇಸ್‌ಬುಕ್ ಸ್ನೇಹಿತನಿಂದ ಬಾಲಕನ ಕಿಡ್ನಾಪ್; 5 ಲಕ್ಷ ರೂ.ಗೆ ಬೇಡಿಕೆ, ಫೋನ್ ಪೇನಲ್ಲಿ 40 ಸಾವಿರ ರೂ. ವಸೂಲಿ!

kidnap fb
Published on

ಬೆಂಗಳೂರು: ಫೇಸ್‌ಬುಕ್ ಸ್ನೇಹಿತನ ನಂಬಿ ನೌಕರಿಗೆ ಅರಸಿ ನಗರಕ್ಕೆ ಬಂದ 17 ವರ್ಷದ ಬಾಲಕನನ್ನು ಅಪಹರಣ ಮಾಡಿದ್ದ ಮೂವರನ್ನು ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ರೈಲ್ವೇ ಪೊಲೀಸರು ಬಂಧಿಸಿದ್ದಾರೆ.

ಪಟ್ಟೇಗಾರಪಾಳ್ಯದ ಕನಕನಗರ ನಿವಾಸಿ ಎ. ಪ್ರಭಾತ್ (21) ಮತ್ತು ಕುಣಿಗಲ್ ನಿವಾಸಿಗಳಾದ ಬಿ.ಕೆ. ರಂಗನಾಥ್ ಅಲಿಯಾಸ್ ಡಾಲಿ (19) ಮತ್ತು ಬಿ.ಎಸ್. ಕುಶಾಲ್ (19) ಬಂಧಿತರು. ಬಿಹಾರದಿಂದ ರೈಲಿನಲ್ಲಿ ಯಶವಂತಪುರ ರೈಲು ನಿಲ್ದಾಣಕ್ಕೆ ಬಂದ ಪ್ರವೀಣ್ ಕುಮಾರ್ (17) ಎಂಬಾತನನ್ನು ಡಿ.12ರಂದು ಅಪಹರಣ ಮಾಡಿದ್ದರು ಎಂದು ರೈಲ್ವೇ ವಿಭಾಗ ಎಸ್‌ಪಿ ಎಸ್.ಕೆ. ಡಾ.ಸೌಮ್ಯಲತಾ ತಿಳಿಸಿದ್ದಾರೆ.

ಬಿಹಾರ ಮೂಲದ ಪ್ರಭಾತ್, ಕುಟುಂಬ 25 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ನಗರದ ಕಾಲೇಜಿನಲ್ಲಿ ಪ್ರಭಾತ್, ಡಿಪ್ಲೊಮಾ ಓದುತ್ತಿದ್ದ. ಕುಣಿಗಲ್ ಕಾಲೇಜಿನಲ್ಲಿ ರಂಗನಾಥ್, ಪಿಯುಸಿ ಓದುತ್ತಿದ್ದ. ಕುಶಾಲ್, ಎಸ್‌ಎಸ್‌ಎಲ್‌ಸಿ ಅರ್ಧಕ್ಕೆ ಬಿಟ್ಟು ಕೃಷಿ ಮಾಡುತ್ತಿದ್ದ. ಪ್ರಭಾತ್, ಕಾಲೇಜಿಗೆ ಹೋಗದೆ ಎಲ್ಲೆಡೆ ಸುತ್ತಾಡುವಾಗ ಈ ಇಬ್ಬರು ಸ್ನೇಹಿತರು ಪರಿಚಯವಾಗಿದ್ದರು.

ಮತ್ತೊಂದೆಡೆ ಬಿಹಾರದ ಪ್ರವೀಣ್, ಎಸ್‌ಎಸ್‌ಎಲ್‌ಸಿ ಓದಿ ಗುಜರಾತಿನ ಅಹಮದಾಬಾದ್‌ನ ಹೋಟೆಲ್‌ನಲ್ಲಿ ಕ್ಯಾಷಿಯರ್ ಆಗಿದ್ದ. 25 ದಿನಗಳ ಹಿಂದೆ ಫೇಸ್‌ಬುಕ್​ನಲ್ಲಿ ಪ್ರಭಾತ್‌ಗೂ ಮತ್ತು ಪ್ರವೀಣ್‌ಗೆ ಪರಿಚಯವಾಗಿತ್ತು. ಇಬ್ಬರು ಬಿಹಾರದವರಾದ ಕಾರಣಕ್ಕೆ ಆತ್ಮೀಯತೆ ಬೆಳೆದಿತ್ತು.

ಬಿಹಾರದಲ್ಲಿ ಪ್ರವೀಣ್, ಪಾಲಕರು ದೊಡ್ಡ ರೈತರು ಆಗಿದ್ದರು. ಇದನ್ನು ತಿಳಿದ ಪ್ರಭಾತ್, ತನ್ನ ಸ್ನೇಹಿತರ ಜತೆ ಸೇರಿ ಪ್ರವೀಣ್‌ನನ್ನು ಬೆಂಗಳೂರಿಗೆ ಕರೆಸಿಕೊಂಡು ಅಪಹರಣ ಮಾಡಿ ಸುಲಿಗೆ ಮಾಡಲು ಸ್ಕೆಚ್ ಹಾಕಿದ್ದ.

ಅದರಂತೆ ಪ್ರವೀಣ್‌ಗೆ ಬೆಂಗಳೂರಿಗೆ ಕರೆಸಿಕೊಳ್ಳಲು ಪ್ರಭಾತ್ ಪ್ಲ್ಯಾನ್ ಮಾಡಿದ್ದ. ಬೆಂಗಳೂರಿಗೆ ಬಂದರೇ ಕೈತುಂಬ ಸಂಬಳ ಸಿಗುವ ಕೆಲಸ ಕೊಡಿಸುವುದಾಗಿ ಪ್ರವೀಣ್‌ಗೆ ಆರೋಪಿ ಆಮಿಷವೊಡ್ಡಿದ್ದ. ಸ್ನೇಹಿತನ ಮಾತು ನಂಬಿದ ಪ್ರವೀಣ್, ಬಿಹಾರಕ್ಕೆ ಹೋಗಿ ಪಾಲಕರಿಗೆ ವಿಷಯ ತಿಳಿಸಿ ನೌಕರಿ ಅರಸಿ ಬೆಂಗಳೂರಿಗೆ ಡಿ.10ರಂದು ರೈಲಿನಲ್ಲಿ ಪ್ರಯಾಣ ಬೆಳೆಸಿದ್ದ. ಡಿ.12ರ ರಾತ್ರಿ 7.30ಕ್ಕೆ ಚಿಕ್ಕಬಾಣವಾರ ನಿಲ್ದಾಣಕ್ಕೆ ಪ್ರವೀಣ್ ಬಂದಿದ್ದಾನೆ.

ಅಲ್ಲಿಂದ ಪ್ರಭಾತ್ ತನ್ನ ಬೈಕ್‌ನಲ್ಲಿ ಪ್ರವೀಣ್‌ನನ್ನು ಕೂರಿಸಿಕೊಂಡು ಪಟ್ಟೇಗಾರಪಾಳ್ಯದ ರೂಮ್‌ಗೆ ಕರೆದೊಯ್ದು ಕೂಡಿ ಹಾಕಿ ಸ್ನೇಹಿತರನ್ನು ಕರೆಸಿಕೊಂಡಿದ್ದಾನೆ. ಅಂದು ರಾತ್ರಿ ಪ್ರವೀಣ್‌ಗೆ ಅವರ ತಂದೆ ಕರೆ ಮಾಡಿದಾಗ ಅಪಹರಣ ಆಗಿರುವ ಬಗ್ಗೆ ಪುತ್ರ ನೋವು ಹಂಚಿಕೊಂಡಿದ್ದ.

ಇದಾದ ಮೇಲೆ ಆರೋಪಿಗಳು, ಪ್ರವೀಣ್ ತಂದೆಗೆ ಕರೆ ಮಾಡಿ 5 ಲಕ್ಷ ರೂ.ಗೆ ಬೇಡಿಕೆ ಒಡ್ಡಿದ್ದರು. ಕೊನೆಗೆ ಚೌಕಾಸಿ ಮಾಡಿ 2 ಲಕ್ಷ ರೂ.ಗೆ ಒಪ್ಪಿದಾಗ ೆನ್ ಪೇ ಮೂಲಕ 40 ಸಾವಿರ ರೂ. ಅನ್ನು ಆರೋಪಿಗಳು ಮಾಡಿಸಿಕೊಂಡಿದ್ದರು. ಆತಂಕಗೊಂಡ ಪ್ರವೀಣ್ ತಂದೆ, ಬೆಂಗಳೂರಿಗೆ ಬಂದು ದೂರು ನೀಡಿದಾಗ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೈಕ್‌ನಲ್ಲೇ ಸುತ್ತಾಡಿಸಿದ್ದ ಕಿಡ್ನಾರ್ಪಸ್ :
ಬೈಕ್‌ನಲ್ಲಿ ಪ್ರವೀಣ್‌ನನ್ನು ಕೂರಿಸಿಕೊಂಡು ಪಟ್ಟೇಗಾರಪಾಳ್ಯದಿಂದ ಕುಣಿಗಲ್‌ಗೆ ಕರೆದೊಯ್ದು ಲಾಡ್ಜ್‌ನಲ್ಲಿ ಇರಿಸಿ ಹಲ್ಲೆ ನಡೆಸಿದ್ದರು. ಅಲ್ಲಿಂದ ಪ್ರವೀಣ್ ತಂದೆಗೆ ಕರೆ ಮಾಡಿಸಿ ಹಣಕ್ಕೆ ಬೇಡಿಕೆ ಒಡ್ಡಿದ್ದರು. ಆನಂತರ ಬೈಕ್‌ನಲ್ಲಿಯೇ ನೆಲಮಂಗಲ ಮತ್ತು ಮಾಗಡಿ ಎಲ್ಲೆಡೆ ಸುತ್ತಾಡಿಸುತ್ತಿದ್ದರು. ದೂರು ಪಡೆದ ಡಿವೈಎಸ್‌ಪಿ ಸಿ.ಆರ್. ಗೀತಾ ನೇತೃತ್ವದ ತಂಡ ಆರೋಪಿಗಳ ಜಾಡು ಹಿಡಿದು ದೂರು ನೀಡಿದ ಕೆಲವೇ ತಾಸಿನಲ್ಲಿ ಪ್ರವೀಣ್‌ನನ್ನು ರಕ್ಷಣೆ ಮಾಡಿ ಆರೋಪಿಗಳನ್ನು ಬಂಧಿಸಿದೆ.

13 ಸಾವಿರ ವೇತನದ ಆಮಿಷ:
ಗುಜರಾತಿನ ಅಹಮದಾಬಾದ್‌ನ ಹೋಟೆಲ್‌ನಲ್ಲಿ ಕ್ಯಾಷಿಯರ್ ಆಗಿದ್ದ ಪ್ರವೀನ್, 8 ಸಾವಿರ ರೂ. ವೇನತ ಪಡೆಯುತ್ತಿದ್ದ. ಬೆಂಗಳೂರಿಗೆ ಕರೆಸಿಕೊಳ್ಳವ ಉದ್ದೇಶದಿಂದ ಪ್ರಭಾತ್, ನಗರದಲ್ಲಿ ನಾನೇ ಹೊಸ ಹೋಟೆಲ್ ತೆರೆಯುತ್ತಿದ್ದು, ಇಲ್ಲಿಗೆ ಕೆಲಸಕ್ಕೆ ಬಂದರೇ 13 ಸಾವಿರ ರೂ. ಕೊಡುವುದಾಗಿ ಆಮಿಷವೊಡ್ಡಿದ್ದ. 5 ಸಾವಿರ ರೂ.ಹೆಚ್ಚುವರಿ ಸಂಬಳ ಸಿಗುತ್ತದೆ ಎಂಬ ಆಸೆಯಿಂದ ಬಾಲಕ ಬೆಂಗಳೂರಿಗೆ ಬಂದಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net