

ಬೈಬಲ್ನಲ್ಲಿ ಯೇಸು ಕಣ್ಣಿನ ಪಾಪದ ಕುರಿತು ಒಂದು ಮಾತು ಹೇಳುತ್ತಾರೆ: ನಿನ್ನ ಬಲಗಣ್ಣು ನಿನಗೆ ಪಾಪಕ್ಕೆ ಕಾರಣವಾದರೆ, ಅದನ್ನು ಕಿತ್ತು ಹಾಕು; ಹಾಗೆಯೇ ನಿನ್ನ ಬಲಗೈ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸು. ಪಾಪ ಮಾಡಿ ಎರಡು ಕಣ್ಣುಗಳಿಂದ ಅಥವಾ ಎರಡು ಕೈಗಳಿಂದ ನರಕಕ್ಕೆ ಹೋಗುವುದಕ್ಕಿಂತ ಒಂದು ಕಣ್ಣು ಹಾಗೂ ಒಂದು ಕೈಯಿಂದ ಸ್ವರ್ಗಕ್ಕೆ ಹೋಗುವುದು ಉಚಿತ. ಯೇಸುವಿನ ಈ ಮಾತು ಭಕ್ತಾದಿಗಳಲ್ಲಿ ಒಂದು ರೀತಿಯ ಭಯವನ್ನು ಹುಟ್ಟಿಸುವುದು ಸಹಜ. ಅಂದ ಮಾತ್ರಕ್ಕೆ ಪಾಪಕ್ಕೆ ಕಾರಣವಾಯಿತು ಎಂದು ಯಾರಾದರೂ ಕಣ್ಣು ಕಿತ್ತು ಹಾಕುವುದು, ಕೈ ಕತ್ತರಿಸುವುದು ಅಷ್ಟಾಗಿ ಕಂಡುಬರುವುದಿಲ್ಲ. ಯೇಸುವಿನ ಉದ್ದೇಶವೂ ಅದಾಗಿರಲಿಲ್ಲ. ಆ ಮೂಲಕ ಅವರು ಒಂದು ಮಹತ್ವದ ಸಂದೇಶವನ್ನು ನೀಡಲು ಬಯಸಿದರು. ಪ್ರತಿ ಮಾನವನ ಪಾಪಕ್ಕೆ ಬಲು ಮುಖ್ಯ ಕಾರಣವೆಂದರೆ ಅತಿಯಾಗಿ ಅಂಟಿಕೊಳ್ಳುವ ಚಟ. ಮಾನವ ಇತರ ಮಾನವರಿಗೆ, ವಸ್ತುಗಳಿಗೆ ಮತ್ತು ಸ್ಥಳಗಳಿಗೆ ಅತಿಯಾಗಿ ಅಂಟಿಕೊಳ್ಳುವುದಿದೆ. ಇದರಿಂದಾಗಿ ಆತ ಹೆಚ್ಚು ಹೆಚ್ಚು ಪಾಪಕ್ಕೆ ಗುರಿಯಾಗುವುದು ಸಹಜ. ಉದಾಹರಣೆಗೆ ಒಬ್ಬಾತ ದುಷ್ಟ ಸ್ನೇಹಿತರ ಸಹವಾಸಕ್ಕೆ ಬಿದ್ದರೆ, ಅರಿವಿಲ್ಲದೆಯೇ ಅವರಿಗೆ ಅಂಟಿಕೊಳ್ಳಲಾರಂಭಿಸುತ್ತಾನೆ ಮಾತ್ರವಲ್ಲ, ಅವರ ಅಪರಾಧದಲ್ಲಿ ಭಾಗಿಯಾಗುತ್ತಾನೆ. ಇಂಥದು ಸಾಧುವಲ್ಲ.
ನಮ್ಮ ಸಂಬಂಧಗಳು ಪಾಪಗಳಿಗೆ ಕಾರಣವಾಗತೊಡಗಿದಾಗ ಎಚ್ಚೆತ್ತುಕೊಂಡು ಅಂಥ ಸಂಬಂಧಗಳಿಂದ ದೂರವಾಗಬೇಕು. ಈ ಮೂಲಕ ಮಾತ್ರ ನಾವು ಸರಿಯಾದ ದಾರಿಯಲ್ಲಿ ನಡೆಯಲು ಸಾಧ್ಯ. ಯೇಸು ಕಣ್ಣಿನ ಅಥವಾ ಕೈಯ ಉಪಮೆ ನೀಡಿದುದರ ತಾತ್ಪರ್ಯ ಇಷ್ಟೇ ಆಗಿದೆ. ಯಾವಾಗಲೂ ಎಚ್ಚರಿಕೆಯಿಂದ ಇರಬೇಕು. ಪಾಪಕ್ಕೆ ನಾಂದಿಯಾಗುವ ಯಾವುದೇ ವ್ಯಕ್ತಿ ಅಥವಾ ವಸ್ತು, ಅದು ಎಷ್ಟೇ ಸುಂದರ ಹಾಗೂ ಮೌಲ್ಯಭರಿತವಾಗಿದ್ದರೂ ಅವುಗಳಿಂದ ತ್ವರಿತಗತಿಯಲ್ಲಿ ದೂರವಾಗಬೇಕು. ಯೇಸು ಇದನ್ನು ಖಡಾಖಂಡಿತವಾಗಿ ಪಾಲಿಸಿದರು. ತಮ್ಮ ಆಪ್ತ ಶಿಷ್ಯರು ಆಗಾಗ ಅವರಿಗೆ ಪ್ರಲೋಭನೆಗಳನ್ನು ಒಡ್ಡುವಾಗ ಯೇಸು ದಂಡಿಸುವುದನ್ನು ಸ್ಮರಿಸಬಹುದಾಗಿದೆ.