

ಎನ್.ಆರ್.ಪುರ: 40 ವರ್ಷ ದಾಟಿದವರು ಪ್ರತಿ 6 ತಿಂಗಳಿಗೊಮ್ಮೆ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆಯ ಡಾ. ದಾನೇಶ್ವರಿ ಸಲಹೆ ನೀಡಿದರು.
ತಾಲೂಕಿನ ಕುದುರೆಗುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಭಾನುವಾರ ಸೀತೂರು, ಕಾನೂರು ಹಾಗೂ ಕೆಸುವೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕೊಪ್ಪ ಯಡಗೆರೆ ಸೊಸೈಟಿ, ಕುದುರೆಗುಂಡಿ ಅಶ್ವಗುಂಡೇಶ್ವರ ಆಟೋ ಚಾಲಕರ ಸಂಘ ಹಾಗೂ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ಆಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣಾ, ಶಸ್ತ್ರಚಿಕಿತ್ಸೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಚಿಕ್ಕ ಮಕ್ಕಳಿಗೂ ಕೆಲವೊಮ್ಮೆ ದೃಷ್ಟಿದೋಷ ಉಂಟಾಗುತ್ತದೆ. ಅತಿಯಾದ ಮೊಬೈಲ್, ಲ್ಯಾಪ್‌ಟ್ಯಾಪ್ ಉಪಯೋಗಿಸಿದಾಗ ಕಣ್ಣಿನ ತೊಂದರೆ ಬರುವ ಸಾಧ್ಯತೆ ಇದೆ. 40 ವರ್ಷ ದಾಟಿದವರಿಗೆ ಹತ್ತಿರದ ದೃಷ್ಟಿ ಕಡಿಮೆಯಾಗುತ್ತದೆ. ಅಂತಹವರು ಲೆನ್ಸ್, ಕನ್ನಡಕ ಬಳಸಬಹುದು. 50 ವರ್ಷ ದಾಟಿದವರಿಗೆ ಕಣ್ಣಿಗೆ ಪೊರೆ ಬರುವ ಸಾಧ್ಯತೆ ಇರುತ್ತದೆ. ವೈದ್ಯರ ಸಲಹೆ ಮೇರೆಗೆ ಕಣ್ಣಿನ ಪೊರೆ ತೆಗೆಸಬೇಕು ಎಂದು ಹೇಳಿದರು.
ಬಿಪಿ ಹಾಗೂ ಶುಗರ್ ಇದ್ದವರು ಕಣ್ಣಿನ ಬಗ್ಗೆ ಜಾಗ್ರತೆ ವಹಿಸಬೇಕು. ಕಣ್ಣಿಗೆ ಬರುವ ರಕ್ತನಾಳದಲ್ಲಿ ಬ್ಲಾಕ್ ಆಗುವ ಸಾಧ್ಯತೆ ಇದೆ. ವಿವಿಧ ಕಾಯಿಲೆಗಳಿಗೆ ನಿರಂತರವಾಗಿ ಮಾತ್ರೆ ತಿನ್ನುವರಿಗೆ ಕಣ್ಣಿನ ತೊಂದರೆ ಹೆಚ್ಚು ಕಾಣಿಸಿಕೊಳ್ಳಲಿದೆ ಎಂದರು.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ರಕ್ತದಾನ ಕೇಂದ್ರದ ಆಶಾ ಮಾತನಾಡಿ, ರಕ್ತವನ್ನು 3 ಭಾಗಗಳಾಗಿ ವಿಂಗಡಿಸುವುದರಿಂದ 3 ಜನರಿಗೆ ರಕ್ತ ನೀಡಿ ಜೀವ ಉಳಿಸಬಹುದು. ಈ ಹಿಂದೆ ದಿನಕ್ಕೆ 30ರಿಂದ 40 ಬಾಟಲ್ ರಕ್ತ ಬೇಕಾಗುತ್ತಿತ್ತು. ಪ್ರಸ್ತುತ ದಿನಕ್ಕೆ 100 ಬಾಟಲ್ ರಕ್ತದ ಅವಶ್ಯಕತೆ ಇದೆ ಎಂದರು.
ಸೀತೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎಸ್.ಸುಬ್ರಹ್ಮಣ್ಯ ಮಾತನಾಡಿ, ಸೃಷ್ಟಿ ನೋಡಬೇಕಾದರೆ ದೃಷ್ಟಿ ಅಗತ್ಯ. ಜನರಿಗೆ ಅನುಕೂಲವಾಗಲಿ ಎಂದು ವಿವಿಧ ಸಂಘ-ಸಂಸ್ಥೆಗಳು ಸೇರಿ ಉಚಿತ ಕಣ್ಣಿನ ಪರೀಕ್ಷೆ ಹಾಗೂ ರಕ್ತದಾನ ಶಿಬಿರ ಏರ್ಪಡಿಸಿದ್ದೇವೆ. ಆಗಾಗ್ಗೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಂಕರ ಕಣ್ಣಿನ ಆಸ್ಪತ್ರೆಯ ಪೇಷಂಟ್ ಕೇರ್ ಮ್ಯಾನೇಜರ್ ರಂಜಿತಾ, ಕಾನೂರು ವಿಎಸ್‌ಎಸ್‌ಎನ್ ಅಧ್ಯಕ್ಷ ಪ್ರಶಾಂತ್, ಕುದುರೆಗುಂಡಿ ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷ ಲಕ್ಷ್ಮಣ, ಮುಖ್ಯಶಿಕ್ಷಕಿ ಲೀನಾ ಡಿಕಾಸ್ಟಾ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದೀಪ, ರಕ್ತದಾನ ಕೇಂದ್ರದ ಡಾ. ಶರಣ್ಯ, ಡಾ. ವಿನಾಯಕ, ಡಾ. ಸಾಯಿಶ್ರೀ, ಆಟೋ ಚಾಲಕರ ಸಂಘದ ಶಾಶ್ವತ್, ಅನಿಲ್ ಮತ್ತಿತರರಿದ್ದರು.