ಸೂಪರ್​ ಮಾರ್ಕೆಟ್​ನಲ್ಲಿ 6 ಜನರಿಗೆ ಚಾಕು ಇರಿತ... 'ಉಗ್ರವಾದಿ'ಗೆ ಅಂತ್ಯ ಹಾಡಿದ ಪೊಲೀಸರು

Crime Scene
Published on

ವೆಲ್ಲಿಂಗ್​ಟನ್​: ನ್ಯೂಜಿಲೆಂಡ್​​ನಲ್ಲಿ ಸೂಪರ್​ಮಾರ್ಕೆಟ್​ ಪ್ರವೇಶಿಸಿ, 6 ಜನ ಗ್ರಾಹಕರಿಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ ಉಗ್ರವಾದಿಯೊಬ್ಬನನ್ನು ಪೊಲೀಸರು ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ. ಅಲ್ಲಿನ ಪ್ರಧಾನಿ ಜಸಿಂದಾ ಅರ್ಡರ್ನ್​ ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ್ದು, ಇದೊಂದು ಭಯೋತ್ಪಾದಕ ಹಲ್ಲೆಯಾಗಿತ್ತು ಎಂದಿದ್ದಾರೆ.

ಪೊಲೀಸರ ಗುಂಡಿನಿಂದ ಮೃತಪಟ್ಟಿರುವ ಹಲ್ಲೆಕೋರನು ಶ್ರೀಲಂಕಾದ ಪ್ರಜೆಯಾಗಿದ್ದು, ಇಸ್ಲಾಮಿಕ್​ ಸ್ಟೇಟ್​ ಗುಂಪಿನ ಪ್ರೇರಣೆಗೊಳಗಾಗಿದ್ದ. ಅವನ ಬಗ್ಗೆ ದೇಶದ ಭದ್ರತಾ ಪಡೆಗಳು ಸ್ವಲ್ಪ ಕಾಲದಿಂದ ನಿಗಾ ವಹಿಸಿದ್ದವು. ಕಾನೂನುರೀತ್ಯ ಅವಕಾಶವಿಲ್ಲದ್ದರಿಂದ ಅವನನ್ನು ಈವರೆಗೂ ಬಂಧಿಸಲಾಗಿರಲಿಲ್ಲ ಎಂದು ಅರ್ಡರ್ನ್​ ತಿಳಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ 2.40ರ ಸುಮಾರಿಗೆ ನ್ಯೂಜಿಲೆಂಡಿನ ಆಕ್ಲಾಂಡ್​ ನಗರದ ಕೌಂಟ್​ಡೌನ್​ ಸೂಪರ್​ಮಾರ್ಕೆಟ್ಟಿಗೆ ಬಂದ ಹಲ್ಲೆಕೋರನು, ಅಂಗಡಿಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ಜನರನ್ನು ಇರಿಯಲಾರಂಭಿಸಿದ. ಅವನನ್ನು ಮನೆಯಿಂದಲೇ ಫಾಲೋ ಮಾಡಿಕೊಂಡು ಬಂದಿದ್ದ ವಿಶೇಷ ಪಡೆಯ ಪೊಲೀಸರು ಅವನನ್ನು ಬಂಧಿಸಲು ಹೋದಾಗ ಅವರನ್ನೂ ಚಾಕುವಿನಿಂದ ಇರಿಯಲು ಮುಂದಾದ. ತಕ್ಷಣ ಅವರು ಗುಂಡು ಹಾರಿಸಿ ಅವನನ್ನು ಕೊಂದರು ಎಂದು ಪೊಲೀಸ್​ ಕಮಿಷನರ್ ಆ್ಯಂಡ್ರ್ಯೂ ಕೋಸ್ಟರ್​ ವಿವರಿಸಿದ್ದಾರೆ.

ಹಲ್ಲೆಕೋರನ ಚಟುವಟಿಕೆಗಳ ಮೇಲೆ ಪೊಲೀಸರ ವಿಶೇಷ ತಂಡವೊಂದು ನಿರಂತರವಾಗಿ ನಿಗಾ ಇಟ್ಟಿದ್ದು, ಕೃತ್ಯ ಎಸಗಿದ 60 ಸೆಕೆಂಡುಗಳಲ್ಲೇ ಅವನಿಗೆ ಅಂತ್ಯ ಹಾಡಲಾಯಿತು. ಈ ಘಟನೆಯಲ್ಲಿ ಇರಿಯಲ್ಪಟ್ಟ ಜನರಲ್ಲಿ ಮೂವರಿಗೆ ಗಂಭೀರ ಗಾಯಗಳಾದವು ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net