

ಬೆಂಗಳೂರು: ವೈದ್ಯಕಿಯ ಪದವಿ ಕೋರ್ಸುಗಳಿಗೆ ಸೆ.14ರಿಂದ 20ರವರೆಗೆ ಆನ್ಲೈನ್ನಲ್ಲಿ ಮಾಪ್ ಅಪ್ ಸುತ್ತಿನ ಸೀಟು ಹಂಚಿಕೆ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಬುಧವಾರ ತಿಳಿಸಿದ್ದಾರೆ.
ಈವರೆಗಿನ ಸೀಟು ಹಂಚಿಕೆಯ ನಂತರ ಉಳಿದಿರುವ 1,213 ಸೀಟುಗಳಿಗೆ ಮಾತ್ರ ಈ ಪ್ರಕ್ರಿಯೆ ನಡೆಯಲಿದೆ. ಈ ಪೈಕಿ12 ಸರಕಾರಿ ಸೀಟುಗಳಾಗಿದ್ದು, 446 ಖಾಸಗಿ ಕಾಲೇಜುಗಳ ಸೀಟುಗಳಾಗಿವೆ. ಮಿಕ್ಕ 755 ಸೀಟುಗಳು ಮ್ಯಾನೇಜ್ಮೆಂಟ್/ಎನ್ಆರ್ಐ ಕೋಟಾದ ಸೀಟುಗಳಾಗಿವೆ. ಹೆಚ್ಚಿನ ವಿವರಗಳಿಗೆ ಪ್ರಾಧಿಕಾರದ ಜಾಲತಾಣವನ್ನು ನೋಡಬಹುದು ಎಂದು ಮಾಹಿತಿ ನೀಡಿದ್ದಾರೆ.
ಪ್ರಾಧಿಕಾರವು ವೈದ್ಯಕಿಯ ಕೋರ್ಸುಗಳಿಗೆ ಈಗಾಗಲೇ ಮೊದಲ ಸುತ್ತಿನ (ಚಾಯ್ಸ್ 1, 2) ಸೀಟು ಹಂಚಿಕೆ ನಡೆಸಿದೆ. ಜತೆಗೆ ಯುಜಿ ನೀಟ್&2023ರ ಅಡಿಯಲ್ಲಿ 2ನೇ ಸುತ್ತಿನ ಸೀಟು ಹಂಚಿಕೆ ನಡೆಸಲಾಗಿದೆ. ಈ ಹಂತಗಳಲ್ಲಿ ಸೀಟು ಪಡೆದುಕೊಂಡಿರುವವರು ಮಾಪ್ ಅಪ್ ಸುತ್ತಿನ ಸೀಟು ಹಂಚಿಕೆಯಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಹೇಳಿದ್ದಾರೆ.
ಮಾಪ್ ಅಪ್ ಸುತ್ತಿನಲ್ಲಿ ಪಾಲ್ಗೊಳ್ಳಲು ಬಯಸುವ ವಿದ್ಯಾರ್ಥಿಗಳು ರೂ.1 ಲಕ್ಷ ಮುಂಜಾಗ್ರತಾ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕು. ಇದು ಎಲ್ಲ ವರ್ಗದ ಅಭ್ಯರ್ಥಿಗಳಿಗೂ ಅನ್ವಯಿಸುತ್ತದೆ. ಸೀಟು ಪಡೆದುಕೊಳ್ಳುವ ಅಭ್ಯರ್ಥಿಗಳ ಶುಲ್ಕದ ಕಡೆಗೆ ಇದನ್ನು ಹೊಂದಿಸಲಾಗುವುದು. ಒಂದು ವೇಳೆ ಮಾಪ್ ಅಪ್ ಸುತ್ತಿನಲ್ಲಿ ಸೀಟು ಪಡೆದುಕೊಂಡ ನಂತರ ಅಭ್ಯರ್ಥಿಗಳು ರ್ನಿದಿಷ್ಟ ಕಾಲೇಜಿನಲ್ಲಿ ಪ್ರವೇಶ ಪಡೆಯಲು ವಿಫಲರಾದರೆ, ಅವರ ಮುಂಜಾಗ್ರತಾ ಶುಲ್ಕವನ್ನು ಹಿಂದಿರುಗಿಸುವುದಿಲ್ಲ. ಬದಲಿಗೆ ಅಂಥವರು ಪ್ರಾಧಿಕಾರದ ನಿಯಮಗಳಂತೆ ಇಡೀ ವರ್ಷದ ಶುಲ್ಕವನ್ನು ಭರಿಸಬೇಕಾಗುತ್ತದೆ. ಪ್ರಾಧಿಕಾರದಲ್ಲಿ ಬೇರೆ ಕೋರ್ಸುಗಳಿಗೆ ಕಟ್ಟಿರಬಹುದಾದ ಶುಲ್ಕವನ್ನು ಇದಕ್ಕೆ ಹೊಂದಿಸಲು ಅವಕಾಶವಿರುವುದಿಲ್ಲ.
ಮುಂಜಾಗ್ರತಾ ಶುಲ್ಕ ಕಟ್ಟಿದ ನಂತರ ಅರ್ಹ ಅಭ್ಯರ್ಥಿಗಳು ಹೊಸದಾಗಿ ತಮ್ಮ ಆಯ್ಕೆ ನಮೂದಿಸಲು ಅವಕಾಶ ಕೊಡಲಾಗುವುದು. ಹಿಂದಿನ ಸುತ್ತುಗಳಲ್ಲಿ ನಮೂದಿಸಿರುವ ಆಯ್ಕೆಗಳನ್ನು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಾಧಿಕಾರದ ಮೂಲಕ ದಂತ ವೈದ್ಯಕಿಯ ಸೀಟು ಪಡೆದುಕೊಂಡಿರುವವರು ಮಾಪ್ ಅಪ್ ಸುತ್ತಿನಲ್ಲಿ ಕೇವಲ ವೈದ್ಯಕಿಯ ಪದವಿ ಸೀಟುಗಳಿಗಾಗಿ ಮಾತ್ರ ಪಾಲ್ಗೊಳ್ಳಬಹುದು. ಜತೆಗೆ ಮೊದಲ ಅಥವಾ ಎರಡನೇ ಸುತ್ತಿನಲ್ಲಿ ಸೀಟು ಪಡೆದುಕೊಂಡು ಈಗಾಗಲೇ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಮುಗಿಸಿರುವವರು, ಅಖಿಲ ಭಾರತ ಮಟ್ಟದ ಮಾಪ್ ಅಪ್ ಸುತ್ತಿನಲ್ಲಿ ವೈದ್ಯಕಿಯ ಸೀಟು ಪಡೆದುಕೊಂಡಿರುವವರು ಪ್ರಾಧಿಕಾರ ನಡೆಸುವ ಮಾಪ್ ಅಪ್ ಸೀಟು ಹಂಚಿಕೆಯಲ್ಲಿ ಪಾಲ್ಗೊಳ್ಳುವಂತಿಲ್ಲ.