ಇವಿ ವಾಹನಗಳ ಉತ್ತೇಜನ ಯೋಜನೆ 'ಫೇಮ್' ವಿಸ್ತರಣೆ

ವಿಜಯವಾಣಿ-5-1
Published on

ನವದೆಹಲಿ: ವಿದ್ಯುಚ್ಚಾಲಿತ ವಾಹನಗಳಿಗೆ ಉತ್ತೇಜನ ನೀಡುವ ಫೇಮ್ ಯೋಜನೆಯ ಮೂರನೇ ಹಂತ ಅಂತಿಮಗೊಳ್ಳುವವರೆಗೆ ಇಲೆಕ್ಟ್ರಿಕ್ ಮೊಬಿಲಿಟಿ ಪ್ರಮೋಷನ್ ಸ್ಕೀಮ್ (ಇಎಂಪಿಎಸ್) 2024 ವಿಸ್ತರಣೆ ಆಗಲಿದೆ ಎಂದು ಕೇಂದ್ರ ಭಾರಿ ಕೈಗಾರಿಕೆಗಳ ಸಚಿವ ಎಚ್.ಡಿ. ಕುಮಾರಸ್ವಾಮಿ ಸೋಮವಾರ ಪ್ರಕಟಿಸಿದ್ದಾರೆ.

‘ಹೈಬ್ರಿಡ್ ಮತ್ತು ಇಲೆಕ್ಟ್ರಿಕ್ ವಾಹನ ಉತ್ಪಾದನೆ ಮತ್ತು ಅಳವಡಿಕೆ ತ್ವರಿತಗೊಳಿಸುವಿಕೆ’ (ಫೇಮ್ ಯೋಜನೆಯ ಮೂರನೇ ಹಂತ ಅಂತಿಮಗೊಳ್ಳಲು ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು ಎಂದು ವಾಹನಗಳ ಬಿಡಿಭಾಗಗಳ ಉತ್ಪಾದಕರ ಸಂಘದ (ಎಸಿಎಂಎ) ವಾರ್ಷಿಕ ಸಮಾವೇಶದ ಸಂದರ್ಭ ಕುಮಾರಸ್ವಾಮಿ ಹೇಳಿದರು. ಈ ತಿಂಗಳು ಅಂತ್ಯವಾಗಲಿದ್ದ ಇಎಂಪಿಎಸ್ ಇನ್ನು ಒಂದೆರಡು ತಿಂಗಳು ವಿಸ್ತರಿಸಲಾಗುವುದೆಂದು ಸಚಿವರು ವಿವರಿಸಿದರು.

ಏಪ್ರಿಲ್​ನಲ್ಲಿ ಆರಂಭಿಸಲಾಗಿದ್ದ ಇಎಂಪಿಎಸ್ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿತ್ತು. ಫೇಮ್3 ಅಂತಿಮಗೊಳ್ಳುವವರೆಗೆ ಅದನ್ನು ವಿಸ್ತರಿಸಲಾಗುವುದರಿಂದ ವಾಹನೋದ್ಯಮಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಅಭಯ ನೀಡಿದರು. ಈ ವರ್ಷ ಮಾರ್ಚ್​ನಲ್ಲಿ ಪ್ರಕಟಿಸಿದ್ದ 500 ಕೋಟಿ ರೂಪಾಯಿ ವೆಚ್ಚದ ಯೋಜನೆ ಏಪ್ರಿಲ್ 1ರಿಂದ ಜುಲೈ 31ರ ವರೆಗೆ ಅನ್ವಯವಾಗಲಿತ್ತು. ನಂತರ ಅದನ್ನು ಎರಡು ತಿಂಗಳು ವಿಸ್ತರಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net