

ನವದೆಹಲಿ: ಜಾಗತಿಕ ಆರ್ಥಿಕ ಅನಿಶ್ಚಿತತೆಯ ನಡುವೆಯೂ ಭಾರತದ ಸರಕು ಮತ್ತು ಸೇವೆಗಳ ರಫ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ 800 ಶತಕೋಟಿ ಡಾಲರ್ಗಿಂತ ಹೆಚ್ಚಾಗಿ ದಾಖಲೆ ಮಾಡುವ ಸಾಧ್ಯತೆ ಇದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯೆಲ್ ಹೇಳಿದ್ದಾರೆ.
ಕಳೆದ ಹಣಕಾಸು ವರ್ಷದಲ್ಲಿ ರಫ್ತು 778 ಶತಕೋಟಿ ಡಾಲರ್ನಷ್ಟಾಗಿತ್ತು. ಈಗ ಕೆಂಪು ಸಮುದ್ರ ಪ್ರದೇಶದಲ್ಲಿ ಭೌಗೋಳಿಕ ವಾತಾವರಣ ಹದಗೆಟ್ಟು ಯುದ್ಧ ಪರಿಸ್ಥಿತಿ ನೆಲೆಸಿದೆ. ಕಡಿಮೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ದೇಶಗಳು ಕೋವಿಡ್-19 ನಂತರದ ವರ್ಷಗಳಲ್ಲಿ ಆರ್ಥಿಕವಾಗಿ ತೀವ್ರ ಒತ್ತಡ, ವಿದೇಶಿ ವಿನಿಮಯ ಬಿಕ್ಕಟ್ಟು ಎದುರಿಸುತ್ತಿವೆ. ಕೇಂದ್ರ ಸರ್ಕಾರ ರಫ್ತು ವಲಯದಲ್ಲಿ ಹಲವು ನಿರ್ಬಂಧಗಳನ್ನು ವಿಧಿಸಿದೆ. ಆದರೂ ಭಾರತದ ರಫ್ತು ಪ್ರಮಾಣ ಕುಂದಿಲ್ಲ ಎಂದು ಅವರು ವಿಶ್ಲೇಷಿಸಿದ್ದಾರೆ.
ಆಮದು ಕೂಡ ಹೆಚ್ಚಾಗಿದೆ. ಇದು ಬೆಳೆಯುತ್ತಿರುವ ಆರ್ಥಿಕತೆಯ ಸಂಕೇತ. ಅಮೆರಿಕದ ಆಡಳಿತ ಮುಂದೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಆ ರಾಷ್ಟ್ರದ ನೇತಾರರು ಮತ್ತು ಅಧಿಕಾರಿಗಳ ಜತೆ ಆಳವಾದ ಸಮಾಲೋಚನೆ ನಡೆಸಲಾಗುವುದು. ಡೊನಾಲ್ಡ್ ಟ್ರಂಪ್ ಆಡಳಿತದೊಂದಿಗೆ ವಿಶ್ವಾಸದಿಂದ ಕೆಲಸ ಮಾಡಲು ಭಾರತ ಎದುರು ನೋಡುತ್ತಿದೆ ಎಂದು ಗೋಯೆಲ್ ಹೇಳಿದರು.
ಫೋನ್ ಮಾಡಿದ 10 ನಿಮಿಷಗಳಲ್ಲಿ ಆಂಬುಲೆನ್ಸ್ ಸೇವೆ ಒದಗಿಸುವುದಾಗಿ ಬ್ಲಿಂಕಿಟ್ ಕಂಪನಿ ಹೇಳಿರುವ ಕುರಿತು ಗೋಯೆಲ್ ಪ್ರತಿಕ್ರಿಯಿಸಿ, ‘ಏನೇ ಮಾಡಿದರೂ ನೆಲದ ಕಾನೂನನ್ನು ಉಲ್ಲಂಘಿಸಬಾರದು. ಸೇವೆಯಲ್ಲಿ ನಿಯಮಗಳ ಪ್ರಕಾರ ಏನೇನು ಮುನ್ನೆಚ್ಚರಿಕೆಗಳು ಇರಬೇಕೋ ಅದೆಲ್ಲವೂ ಇರಲೇಬೇಕು’ ಎಂದು ಹೇಳಿದರು.
ಎಲೆಕ್ಟ್ರಿಕ್ ವಾಹನಗಳಿಗೆ ಈಗ ನೀಡಲಾಗುತ್ತಿರುವ ಸಹಾಯಧನ ನಿಂತ ಬಳಿಕ ಮತ್ತೆ ಅದನ್ನು ಆರಂಭಿಸುವ ಅವಶ್ಯಕತೆ ಇಲ್ಲ ಎಂಬುದಾಗಿ ಇವಿ ಕಂಪನಿಗಳು ತಿಳಿಸಿವೆ ಎಂಬುದಾಗಿ ಗೋಯೆಲ್ ಹೇಳಿದರು. ಬ್ಯಾಟರಿ ಚಾರ್ಜಿಂಗ್, ಮೂಲಸೌಕರ್ಯ ವಿನಿಮಯ ಮುಂತಾದ ವಿಷಯಗಳ ಬಗ್ಗೆ ಕಂಪನಿಗಳ ಪದಾಧಿಕಾರಿಗಳು ಸಚಿವರ ಜತೆ ಸಮಾಲೋಚನೆ ನಡೆಸಿದರು. ಸ್ವಂತ ಬ್ಯಾಟರಿಯೊಂದಿಗೆ ವಾಹನಗಳನ್ನು ಮಾರಾಟ ಮಾಡಬೇಕೋ, ಬ್ಯಾಟರಿಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕೋ ಎಂಬ ಬಗ್ಗೆ ಕಂಪನಿಗಳೇ ನಿರ್ಧರಿಸಲಿ. ಬಿಜಿನೆಸ್ ಮಾಡೆಲ್ ಹೇಗಿರಬೇಕು ಎಂಬುದನ್ನು ಸರ್ಕಾರ ನಿರ್ಧರಿಸುವುದಿಲ್ಲ ಎಂದು ಸಚಿವರು ಭರವಸೆ ನೀಡಿದರು.