

| ಡಾ. ಮಾಹಿನ್ ಷರೀಫ್, ಕೃಷಿ ಆರ್ಥಿಕ ತಜ್ಞರು
ಕೃಷಿ, ಕೃಷಿಗೆ ಪೂರಕವಾದ ವಲಯಗಳಿಗೆ ಬಜೆಟ್ನಲ್ಲಿ ಸಿಕ್ಕಿರುವ ಆದ್ಯತೆಯನ್ನು ಗಮನಿಸಿದಾಗ ಒಟ್ಟಾರೆ ಕೃಷಿ ವಲಯದ ಬೆಳವಣಿಗೆಗೆ ಪೂರಕವಾಗಿರುವುದನ್ನು ಗಮನಿಸಬಹುದಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಮಂಡಿಸಿರುವುದು ಕೇವಲ ಎಂಟು ತಿಂಗಳ ಅವಧಿಯ ಆಯವ್ಯಯವಾಗಿದೆ. ಆದ್ದರಿಂದ ಕೃಷಿಗೆ ಮೀಸಲಿಟ್ಟಿರುವ ಅನುದಾನ ಸಾಕಾಗುತ್ತದೆ.
ಮಳೆಯ ಕೊರತೆಯಿಂದ ಬರ ಎದುರಾಗುವ ಲಕ್ಷಣಗಳು ಕಂಡು ಬರುತ್ತಿವೆ. ಇಂತಹ ಸಂದರ್ಭದಲ್ಲಿ ಕೃಷಿ ಭಾಗ್ಯ ಯೋಜನೆ ಮರು ಜಾರಿ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಹಿಂದೆ ಕೃಷಿ ಹೊಂಡಗಳ ನಿರ್ವಣಕ್ಕೆ ಆದ್ಯತೆ ನೀಡಲಾಗಿತ್ತು. ಕೃಷಿಹೊಂಡಗಳ ಬಗ್ಗೆ ರೈತರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದನ್ನು ನಾವು ಅಧ್ಯಯನದ ಸಂದರ್ಭದಲ್ಲಿ ಗಮನಿಸಿದ್ದೇವೆ. ಇದಕ್ಕೆ 100 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಆದ್ದರಿಂದ ಇದೊಂದು ಒಳ್ಳೆಯ ಕಾರ್ಯಕ್ರಮವಾಗಿ ಹೊರ ಹೊಮ್ಮುವ ಸಾಧ್ಯತೆಗಳಿವೆ.
ಕೃಷಿಕರಿಗೆ ಶೂನ್ಯ ಬಡ್ಡಿದರದ ಅಲ್ಪಾವಧಿ ಸಾಲವನ್ನು 3 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಿರುವುದು ಧನಾತ್ಮಕ ಬೆಳವಣಿಗೆ. ಕೃಷಿ ಉತ್ಪಾದಕ ಸಂಸ್ಥೆಗಳಿಗೆ ಆದ್ಯತೆ ನೀಡಲಾಗಿದೆ. ಇದರಿಂದ ಕೃಷಿಕರ ಉತ್ಪನ್ನಗಳ ರಫ್ತು ಮಾಡುವುದಕ್ಕೆ ಅನುಕೂಲವಾಗಲಿದೆ. ಏಕೆಂದರೆ ಮೂಲಸೌಕರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ. ಕೃಷಿಯಲ್ಲಿ ನವೋದ್ಯಮ, ನಂದಿನಿ ಮಾದರಿಯಲ್ಲಿ ಏಕೀಕೃತ ಬ್ರಾ್ಯಂಡಿಂಗ್ ಮಾಡಲು ಮುಂದಾಗಿರುವುದು, ಕಿರು ಆಹಾರ ಸಂಸ್ಕರಣಾ ಉದ್ದಿಮೆದಾರರಿಗೆ ಬೆಂಬಲ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿವೆ.
ಕೃಷಿಗೆ ಪೂರಕವಾದ ನೀರಾವರಿಗೆ ಒತ್ತು ನೀಡಲಾಗಿದ್ದು 940 ಕೋಟಿ ರೂ.ಗಳು ಹೆಚ್ಚಿನ ಅನುದಾನ ನೀಡಲಾಗಿದೆ. ಸಣ್ಣ ನೀರಾವರಿಗೂ ಆದ್ಯತೆ ಸಿಕ್ಕಿದೆ. ಎತ್ತಿನಹೊಳೆ ಯೋಜನೆಗೆ ವೇಗ ನೀಡಲು ಮುಂದಾಗಿರುವ ಕ್ರಮ ಒಳ್ಳೆಯದಾಗಿದೆ. ಆದರೆ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಇನ್ನಷ್ಟು ಆದ್ಯತೆ ನೀಡಬಹುದಾಗಿತ್ತು. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತೋಟಗಾರಿಕೆ ಕ್ಷೇತ್ರದ ಅರಿವು ಮೂಡಿಸಲು ವಿದ್ಯಾರ್ಥಿಗಳಿಗಾಗಿ ತೋಟಗಾರಿಕೆ ಎಂಬ ಹೊಸ ಯೋಜನೆಯನ್ನು ಜಾರಿಗೆ ತರುತ್ತಿರುವ ಕ್ರಮವು ಉತ್ತಮ ಬೆಳವಣಿಗೆಯಾಗಿದೆ. ಮಕ್ಕಳಿಗೆ ಕೃಷಿ ಮತ್ತು ತೋಟಗಾರಿಕೆಯ ಬಗ್ಗೆ ಆಸಕ್ತಿ ಮೂಡಿಸಲು ಇದರಿಂದ ಸಹಾಯವಾಗುತ್ತದೆ. ಜಿಐ ಟ್ಯಾಗ್ ಪಡೆದಿರುವ ಅನೇಕ ತೋಟಗಾರಿಕೆ ಉತ್ಪನ್ನಗಳ ಅಭಿವೃದ್ಧಿಗೆ ಮುಂದಾಗಿರುವುದು, ಹೂವು ಬೆಳೆಗಾರರಿಗೆ ಹೊಸ ತಳಿಗಳನ್ನು ಒದಗಿಸಲು ರೂಪಿಸಿರುವ ಯೋಜನೆ ರೈತರಿಗೆ ಸಹಾಯಕಾರಿಯಾದ ಕ್ರಮಗಳಾಗಿವೆ.
ಕೃಷಿ ಶಿಕ್ಷಣ ಮತ್ತು ಕೃಷಿ ಕ್ಷೇತ್ರದ ಸಂಶೋಧನೆಗೆ ಆದ್ಯತೆ ಸಿಕ್ಕಿಲ್ಲ. ಕೃಷಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ಮೀಸಲಿರಿಸಬೇಕಾಗಿತ್ತು. ಕೃಷಿ ಕ್ಷೇತ್ರದಲ್ಲಿ ಈಗ ಎಲ್ಲ ಕೃಷಿ ವಿವಿಗಳಲ್ಲಿ ಸಾಕಷ್ಟು ಸಂಶೋಧನೆ ನಡೆದಿವೆ. ಆದರೆ ಇನ್ನೂ ಹೆಚ್ಚಿನ ಅನುದಾನ ಸಿಕ್ಕಿದ್ದರೆ ಸಂಶೋಧನೆ ಇನ್ನಷ್ಟು ವಿಸ್ತಾರವಾಗುತ್ತಿತ್ತು. ಕೃಷಿ ಇಲಾಖೆಯಲ್ಲಿ ಮಾನವ ಸಂಪನ್ಮೂಲ ಕಡಿಮೆ ಇದೆ. ಖಾಲಿ ಹುದ್ದೆಗಳಲ್ಲಿ ಸ್ಪಲ್ವವಾದರೂ ಭರ್ತಿ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದರೆ ಕೃಷಿ ಪದವೀಧರರಿಗೆ ಹಾಗೂ ಕೃಷಿಕರಿಗೆ ಅನುಕೂಲವಾಗುತ್ತಿತ್ತು.
ನರೇಗಾ ಯೋಜನೆಯಲ್ಲಿ ಹುಲ್ಲುಗಾವಲು ಪ್ರದೇಶ ವಿಸ್ತರಣೆಗೆ ಒತ್ತು ನೀಡಲಾಗಿದೆ. ಇದರಿಂದ ಗ್ರಾಮೀಣ ಭಾಗದ ರೈತರು ಸಾಕುವ ಜಾನುವಾರುಗಳಿಗೆ ಸಹಾಯಕವಾಗುತ್ತದೆ.ಒಟ್ಟಾರೆ ಕೃಷಿ ಮತ್ತು ಪೂರಕ ವಲಯದ ಅಭಿವೃದ್ಧಿಗೆ ಬಜೆಟ್ ಸಹಾಯಕವಾಗಿದೆ.