

ವಾಷಿಂಗ್ಟನ್: ಕರ್ನಾಟಕ, ಭಾರತ, ಪೂರ್ತಿ ವಿಶ್ವವೇ ನಿಮಗೆ ಬೇಸರ ತರಿಸಿಬಿಟ್ಟಿದೆಯೇ? ಹಾಗಾದರೆ ಸದ್ಯದಲ್ಲೇ ನಿಮಗೆ ವಿಶೇಷ ಅವಕಾಶವೊಂದು ಸಿಗಲಿದೆ. ಇನ್ನು ಕೆಲ ವರ್ಷಗಳಲ್ಲಿ ಬಾಹ್ಯಾಕಾಶದಲ್ಲೇ ಹೋಟೆಲ್ ಸಿದ್ಧವಾಗಲಿದ್ದು, ನೀವು ಈ ಭೂಮಿಯನ್ನೇ ಬಿಟ್ಟು ಹೋಗಿರಬಹುದು.
ಡೈಲಿ ಮೇಲ್ ಪತ್ರಿಕೆಯ ವರದಿಯ ಪ್ರಕಾರ ಆರ್ಬಿಟಲ್ ಅಸೆಂಬ್ಲಿ ಹೆಸರಿನ ಸಂಸ್ಥೆ ಇಂತದ್ದೊಂದು ಸಾಹಸಕ್ಕೆ ಕೈ ಹಾಕಲಿದೆ. ಲೋ ಅರ್ಥ್ ಆರ್ಬಿಟ್ನಲ್ಲಿ ಒಂದು ಸ್ಟೇಷನ್ ತಯಾರಿಸಿ ಅದರಲ್ಲಿ ಹೋಟೆಲ್ ನಿರ್ಮಿಸಲಾಗುವುದು. ಆ ಹೋಟೆಲ್ ಸುಮಾರು 400 ಜನರಿಗೆ ವಸತಿ ನೀಡುವ ಸಾಮರ್ಥ್ಯವನ್ನು ಹೊಂದಿರಲಿದೆ. ಬಾರ್, ಸ್ಪಾ ಸೇರಿ ಮಾಮೂಲಿ ಹೋಟೆಲ್ಗಳಲ್ಲಿ ಸಿಗುವ ಪ್ರತಿಯೊಂದು ಸೌಲಭ್ಯವೂ ಅದರಲ್ಲಿರಲಿದೆ. 2025ರಿಂದ ನಿರ್ಮಾಣ ಕಾರ್ಯ ಆರಂಭವಾಗಲಿದ್ದು, 2027ಕ್ಕೆ ಹೋಟೆಲ್ ಸಿದ್ಧವಿರಲಿದೆ ಎಂದು ಸಂಸ್ಥೆ ತಿಳಿಸಿದೆ.
ಈ ಹೋಟೆಲ್ನ ಇನ್ನೊಂದು ವಿಶೇಷ ಏನೆಂದರೆ ಹೋಟೆಲ್ 90 ನಿಮಿಷಗಳಲ್ಲಿ ಪೂರ್ತಿ ಭೂಮಿಯನ್ನೇ ಒಂದು ಸುತ್ತು ಸುತ್ತಿ ಬರಲಿದೆ. ಪ್ರಪಂಚ ಸುತ್ತಬೇಕು ಎನ್ನುವ ಕನಸಿರುವವರಿಗೆ ಈ ಹೊಟೆಲ್ ಒಂದು ವರದಾನ ಆದರೂ ಆಗಬಹುದು. ಆದರೆ ಹೋಟೆಲ್ಗೆ ಹೋಗುವುದು ಹೇಗೆ? ಎಷ್ಟು ಖರ್ಚಾಗಲಿದೆ ಎನ್ನುವ ಮಾಹಿತಿಗಳನ್ನು ಸಂಸ್ಥೆ ಬಿಟ್ಟುಕೊಟ್ಟಿಲ್ಲ. (ಏಜೆನ್ಸೀಸ್)