ಪಾಮಿರ್​ ಪರ್ವತ ಶ್ರೇಣಿಯೆಲ್ಲ ತನ್ನದೇ..! ಚೀನಾ ವಿಸ್ತರಣಾ ದಾಹಕ್ಕೆ ಕೊನೆಯೇ ಇಲ್ಲ; ತಜಕಿಸ್ತಾನ್​ಗೆ ಆತಂಕ

pamir
Published on

ನವದೆಹಲಿ: ಚೀನಾದ ವಿಸ್ತರಣಾ ದಾಹಕ್ಕೆ ಕೊನೆಯೇ ಇಲ್ಲ ಎನ್ನುವಂತಾಗಿದೆ. ದಕ್ಷಿಣ ಚೀನಾ ಸಮುದ್ರ, ಲಡಾಕ್​, ಭೂತಾನ್​, ಜಪಾನ್​ ಬಳಿಕ ಪುಟ್ಟರಾಷ್ಟ್ರ ತಜಕಿಸ್ತಾನ್​ ಜತೆಗೂ ಗಡಿ ತಂಟೆಗೆ ತೆಗೆದಿದೆ.

ತಜಕಿಸ್ತಾನದ ಪಾಮಿರ್​ ಪರ್ವತಶ್ರೇಣಿ ಸಂಪೂರ್ಣವಾಗಿ ತನಗೆ ಸೇರಿದ್ದ ಕ್ಯಾತೆ ತೆಗೆದಿದೆ. ಚೀನಾದ ಅಧಿಕೃತ ಸುದ್ದಿ ಸಂಸ್ಥೆ ಕೂಡ ಇದೇ ವಾದವನ್ನು ಮುಂದಿಟ್ಟಿರುವುದರಿಂದ ತಜಕಿಸ್ತಾನ್​ ಕೂಡ ಆತಂಕಕ್ಕೆ ಒಳಗಾಗಿದೆ.

ಚೀನಾದ ಇತಿಹಾಸಕಾರ ಚೋ ಯಾವ್​ ಲೂ ಬರೆದಿರುವ ಲೇಖನವೊಂದರಲ್ಲಿ ಪಾಮಿರ್​ ಪರ್ವತ ಪ್ರದೇಶವೆಲ್ಲವೂ ಚೀನಾಗೆ ಸೇರಿದ್ದು. ಅದನ್ನು ಚೀನಾಗೆ ಮರಳಿಸಲೇಬೆಕು ಎಂದು ವಾದ ಮಂಡಿಸಿದ್ದಾನೆ. ಇದು ತಜಕಿಸ್ತಾನ್​ ಮಾತ್ರವಲ್ಲ, ರಷ್ಯಾದ ಗಮನವನ್ನು ಸೆಳೆದಿದೆ.

ಈತನ ವಾದದ ಪ್ರಕಾರ 1911ರಲ್ಲಿ ಹೊಸ ಚೀನಾ ರಚನೆಯಾದ ಬಳಿಕ ಕಳೆದು ಹೋದ ಭೂಪ್ರದೇಶಗಳನ್ನು ಮರಳಿ ಚೀನಾದ ತೆಕ್ಕೆಗೆ ತರುವುದು ಅಧಿಕಾರಿಗಳ ಕಾರ್ಯವಾಗಿತ್ತು. ಅದರಂತೆ, ಕೆಲ ಪ್ರದೇಶಗಳು ಮರಳಿದರೂ, ಇನ್ನೂ ಬಹಳಷ್ಟು ಪ್ರದೇಶ ನೆರೆ ರಾಷ್ಟ್ರಗಳ ಅಧೀನದಲ್ಲಿದೆ. ಅದರಂತೆ, ಪಾಮಿರ್​ ಪರ್ವತವೆಲ್ಲ ಚೀನಾದ್ದಾಗಿದೆ ಎಂದು ಚೋ ಹೇಳಿಕೆ.

2010ರಲ್ಲಿ ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡಿರುವ ತಜಕಿಸ್ತಾನ ಪಾಮಿರ್​ ಪರ್ವತದ 1,158 ಚ.ಕಿ.ಮೀ ಪ್ರದೇಶವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದೆ. ಹೊಸ ಬೆಳವಣಿಗೆ ಸಹಜವಾಗಿಯೇ ತಜಕಿಸ್ತಾನಕ್ಕೆ ಆತಂಕವುಂಟು ಮಾಡಿದೆ.

ಈ ನಡುವೆ ತಜಕಿಸ್ತಾನದ 146 ಕಡೆಗಳಲ್ಲಿ ಚಿನ್ನದ ಗಣಿಗಾರಿಕೆ ನಡೆಸಲು ಚೀನಾ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಅಭಿವೃದ್ಧಿ ಹೆಸರಲ್ಲಿ ನೆರವು ನೀಡಿ, ಮೂಲಸೌಕರ್ಯ ಒದಗಿಸಿ ಅದನ್ನು ತನ್ನದೇ ಎನ್ನುವುದು ಚೀನಾದ ವಾದ ಎಂದೇ ವಿಶ್ಲೇಷಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net